ವೇಳಾಂಗಣಿ ಮಾತೆಯ ಮೊದಲ ಪವಾಡಗಳು

Advertisements
Share

ಸುಮಾರು ನಾನೂರು ವರ್ಷಗಳ ಹಿಂದೆ ನಡೆದ ಘಟನೆ ಅದು. ಹಳ್ಳಿಯೊಂದರಲ್ಲಿ ದನಕರುಗಳನ್ನು ಸಾಕುತ್ತಿದ್ದ ಗೌಳಿಗನ ಮಗ, ಪ್ರತಿದಿನವೂ ಹತ್ತು ಕಿಲೊ ಮೀಟರ್ ದೂರದ ನಾಗಪಟ್ಟಣಂದಲ್ಲಿನ ಶ್ರೀಮಂತ ಕಟುಂಬವೊಂದಕ್ಕೆ ಹಾಲು ಕೊಂಡೊಯ್ಯತ್ತಿದ್ದ. ದಾರಿಯಲ್ಲಿ ಒಂದು ನೀರಿನ ಕುಂಟೆ ಮತ್ತು ಅದರ ದಡದಲ್ಲಿ ದೊಡ್ಡ ಆಲದ ಮರವಿತ್ತು.

ಬೇಸಿಗೆಯ ಒಂದು ದಿನ ಕುಂಟೆಯ ನೀರು ಕುಡಿದು ನೀರಡಿಕೆಯನ್ನು ತಣಿಸಿಕೊಂಡ ಬಾಲಕ, ಆಲದ ಮರದ ನೆರಳಲ್ಲಿ ನಿದ್ದೆ ಹೋದ. ಸ್ವಲ್ಪ ಹೊತ್ತಿನಲ್ಲಿ ಎಚ್ಚರವಾದಾಗ, ಅವನ ಎದುರು ಸುಂದರ ಕನ್ಯೆಯೊಬ್ಬಳು, ಮೋಹಕ ನಗುಮೊಗದ ಮಗುವನ್ನು ಹಿಡಿದುಕೊಂಡು ನಿಂತಿದ್ದಳು.

ಎಚ್ಚೆತ್ತ ಬಾಲಕನನ್ನು ಮಾತನಾಡಿಸಿದ ಆ ಸುಂದರ ಮಹಿಳೆ, ತನ್ನ ತೋಳುಗಳಲ್ಲಿದ್ದ ತನ್ನ ಮಗುವಿಗೆ ಸ್ವಲ್ಪ ಹಾಲು ಕೇಳಿಪಡೆದುಕೊಂಡು ಮಗುವಿಗೆ ಕುಡಿಸಿದಳು. ಆ ಮಾತೆ ಮತ್ತು ಮಗುವಿನ ದರ್ಶನದಿಂದ ದೈವೀ ಸಂತೋಷವನ್ನು ಬಾಲಕ ಅನುಭವಿಸಿದ. ನಂತರ, ಆ ಬಾಲಕ ನಾಗಪಟ್ಟಣಂ ತಲುಪಿದ. ಎಂದಿನಂತೆ ಅಲ್ಲಿನ ವಾಡಿಕೆಯ ಮನೆಗೆ ಹಾಲು ಕೊಟ್ಟು, `ಈ ಹಾಲಿನಲ್ಲಿನ ಸ್ವಲ್ಪ ಪಾಲನ್ನು ಕುಂಟೆಯ ಸಮೀಪ ಸಿಕ್ಕಿದ್ದ ಸುಂದರ ಮಹಿಳೆಯ ಮಗುವಿಗೆ ಕೊಟ್ಟಿರುವೆ ಎಂದು ಹೇಳಿದ.

`ದಿನವೂ ತರುತ್ತಿದ್ದ ಹಾಲಿಗಿಂತ ಕಡಿಮೆ ಹಾಲು ತಂದಿರುವೆ ಎಂದು ಕ್ಷಮೆ ಯಾಚಿಸಿದ. ಆದರೆ, ಅವನ ಕ್ಯಾನಿನಲ್ಲಿನ ಹಾಲನ್ನು ಮನೆಯ ಯಜಮಾನ ತಂದಿಟ್ಟ ಪಾತ್ರೆಗೆ ಸುರಿದಾಗ, ದಿನವೂ ಅವರು ಪಡೆಯುತ್ತಿದ್ದಷ್ಟೇ ಹಾಲಿದ್ದುದು ಕಂಡುಬಂದಿತು. ಆಗ, ಆ ಯಜಮಾನ ಮತ್ತು ಆ ಬಾಲಕ ಇಬ್ಬರೂ ಅಚ್ಚರಿಪಟ್ಟರು.

ನಡೆದ ಸಂಗತಿಯನ್ನು ಕೇಳಿ ಆಸಕ್ತಿ ತಳೆದ ನಾಗಪಟ್ಟಣಂದ ಯಜಮಾನ, ಆ ಬಾಲಕನೊಂದಿಗೆ ತಾಯಿ ಮತ್ತು ಮಗು ದರ್ಶನ ಕೊಟ್ಟ ಸ್ಥಳಕ್ಕೆ ಭೇಟಿಕೊಟ್ಟು, ಆ ಸ್ಥಳಕ್ಕೆ ಅಡ್ಡಬಿದ್ದು ತನ್ನ ಗೌರವ ಸಲ್ಲಿಸಿದ. ಈ ಸುದ್ದಿ ಸುತ್ತಮುತ್ತಲ ಊರುಗಳಲ್ಲಿ ಕಾಳ್ಗಿಚ್ಚಿನಂತೆ ಪ್ರಸಾರವಾಯಿತು.

ನಾಗಪಟ್ಟಣಂದಲ್ಲಿನ ಕ್ರೈಸ್ತರು, ಇದು ಮಾತೆ ಮರಿಯಳ ದರ್ಶನವೆಂದು ಯೋಚಿಸಿ, ಆ ಸ್ಥಳವನ್ನು ಪವಿತ್ರವೆಂದು ಬಗೆದರು. ಆ ಕುಂಟೆಯನ್ನು `ಮಾದಾ ಕುಳಂ ಅಂದರೆ, ತಾಯಿ ಮರಿಯಳ ಕೊಳ ಎಂದು ಹೆಸರಿಸಿ ಕರೆಯತೊಡಗಿದರು.

ಮಜ್ಜಿಗೆ ಮಾರುವ ಬಾಲಕ:

ಗೌಳಿಗರ ಬಾಲಕನಿಗೆ ದರ್ಶನ ಕೊಟ್ಟ ಮಾತೆ ಮರಿಯಳು, ಸ್ವಲ್ಪ ವರ್ಷಗಳು ಕಳೆದ ನಂತರ ಒಬ್ಬ ಮಜ್ಜಿಗೆ ಮಾರುವ ಹುಡುಗನಿಗೆ ದರ್ಶನ ನೀಡಿದಳು. ಸಮೀಪದ ಒಂದು ಹಳ್ಳಿಯಲ್ಲಿ, ಒಬ್ಬಳು ವಿಧವೆ ಇದ್ದಳು. ಅವಳ ಮಗ ಕುಂಟನಾಗಿದ್ದ. ಯಾವ ಕೆಲಸವೂ ಅವನಿಂದ ಆಗುತ್ತಿರಲಿಲ್ಲ.

ತನ್ನ ಕುಂಟ ಮಗನನ್ನು ಮತ್ತು ಮಜ್ಜಿಗೆಯ ಬಿಂದಿಗೆಯನ್ನು ಹೊತ್ತುಕೊಂಡು ದಾರಿ ಪಕ್ಕದ ಎತ್ತರದ ಸ್ಥಳದಲ್ಲಿ ಆಲದ ಮರದ ಕೆಳಗೆ ಕೂಡಿಸುತ್ತಿದ್ದಳು. ಆತ, ಬಿಸಿಲಲ್ಲಿ ದಣಿದು ಬಂದು ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ದಾರಿ ಹೋಕರಿಗೆ ಮಜ್ಜಿಗೆ ಮಾರುತ್ತಿದ್ದ. ಅದರಿಂದ ಬಂದ ಆದಾಯದಿಂದ ಅವರ ಜೀವನ ನಿರ್ವಹಣೆಯಾಗುತ್ತಿತ್ತು.

ಒಂದು ದಿನ ಒಬ್ಬ ದಾರಿಹೋಕನು ಕಾಣಿಸಲಿಲ್ಲ. ಅಷ್ಟರಲ್ಲಿ ಅವನಿಗೆ, ಸುಂದರ ಮಹಿಳೆ ಮತ್ತು ಹಸನ್ಮುಖಿ ಮಗುವಿನ ದರ್ಶನವಾಯಿತು. `ನನ್ನ ಮಗುವಿಗೆ ಮಜ್ಜಿಗೆ ಕೊಡಪ್ಪಾ ಎಂದು ಆ ಸುಂದರ ಮಹಿಳೆ ಕೋರಿಕೊಂಡಾಗ, ಆ ಕುಂಟ ಬಾಲಕ ಮಜ್ಜಿಗೆ ಕೊಟ್ಟು ಕೃತಾರ್ಥಭಾವವನ್ನು ಅನುಭವಿಸಿದ.

ಕಳಂಕರಹಿತ ಶುಭ್ರಬಟ್ಟೆ ತೊಟ್ಟಿದ್ದ ಮಹಿಳೆ ಮತ್ತು ಆಕೆಯ ಮಗು ಜೊತೆಯಾಗಿ ಮೋಹಕವಾಗಿ ಕಾಣುತ್ತಿದ್ದರು. ಅವರನ್ನೇ ನೋಡುತ್ತಾ ತನ್ನನ್ನೇ ತಾನು ಮರೆತಿದ್ದ ಕುಂಟ ಬಾಲಕನ ಕಾಲು ಅದಾವುದೋ ಮಾಯದಲ್ಲಿ ಸರಿಹೋಗಿತ್ತು!

ಎದ್ದು ನಿಂತ ಕುಂಟ, ಗುಡಿ ಕಟ್ಟಿದ ವಿಶ್ವಾಸಿ:

ಆ ಮಹಿಳೆಯು, ಹುಡುಗನ ಉದಾರತೆಯನ್ನು ಕೊಂಡಾಡಿ, `ನನ್ನದೊಂದು ಕೆಲಸ ಮಾಡುತ್ತೀಯ? ಎಂದು ಕೇಳಿದಳು. `ನಾಗಪಟ್ಟಣಂನಲ್ಲಿ ಒಬ್ಬ ಸಿರಿವಂತ ಕ್ರೈಸ್ತನಿದ್ದಾನೆ. ಅವನಲ್ಲಿಗೆ ಹೋಗಿ, ನನಗಾಗಿ ಒಂದು ಚಿಕ್ಕ ಗುಡಿಯನ್ನು ಕಟ್ಟಿಸುವಂತೆ ಹೇಳು ಎಂದು ತಿಳಿಸಿದಳು. ಕುಂಟ, `ನಾನು ನಡೆಯಲಾರೆ ಎಂದ. `ಸರಿ ಎದ್ದು ನಿಲ್ಲು ಎಂದು ಮಹಿಳೆ ನುಡಿಯತ್ತಿದ್ದಂತೆಯೇ ಎದ್ದುನಿಂತ ಬಾಲಕ ಸಂತೋಷದಲ್ಲಿ ತೇಲಾಡತೊಡಗಿದ.

ಆ ಸುಂದರ ಮಹಿಳೆ ತಿಳಿಸಿದ ಕ್ರೈಸ್ತ ಸದ್ಗೃಹಸ್ತನ ಮನೆಗೆ ಮುಟ್ಟಿ, ಮಗುವನ್ನು ಹೊತ್ತಿದ್ದ ಸುಂದರಿಯ ದರ್ಶನ ಮತ್ತು ಆಕೆಯ ಹೇಳಿಕೆಯನ್ನು ಅರುಹಿದ. ಅದರ ಹಿಂದಿನ ರಾತ್ರಿ, ಆ ಸದ್ಗೃಹಸ್ತನ ಕನಸಿನಲ್ಲಿ ಕಾಣಿಸಿಕೊಂಡ ಮಾತೆ ಮರೆಯಳು, `ವೇಲಾಂಗಣಿಯಲ್ಲಿ ನನಗಾಗಿ ಒಂದು ಚಿಕ್ಕ ಗುಡಿಯನ್ನು ಕಟ್ಟಿಸು ಎಂದು ಆದೇಶಿಸಿದ್ದಳು.

ಆ ಸದ್ಗೃಹಸ್ತ, ಪವಾಡಗಳು ನಡೆದ ಸ್ಥಳಗಳ ಹತ್ತಿರ, ಒಂದು ಗುಡಿಸಲಲ್ಲಿ ಬಾಲ ಯೇಸುವನ್ನು ಎತ್ತಿಕೊಂಡು ನಿಂತಿರುವ ಮಾತೆ ಮರಿಯಳ ಸ್ವರೂಪವನ್ನು ಇಟ್ಟು, ಪುಟ್ಟ ಗುಡಿಯೊಂದನ್ನು ಕಟ್ಟಿಸಿದ. ಅಲ್ಲಿಗೆ ಬಂದು ಬೇಡಿಕೊಂಡವರ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆಗಳು ಆಗುತ್ತಿದ್ದ ಸಮಾಚಾರಗಳು, ಸಮೀಪದ ಊರುಗಳಲ್ಲೆಲ್ಲಾ ಸುದ್ದಿಯಾಗಿ ಸದ್ದು ಮಾಡತೊಡಗಿದವು. ಮಾತೆ ಮರಿಯಳು ಜನಪದರಿಗೆ ಆರೋಗ್ಯಮಾತೆ ಆದಳು.

ನೌಕಾಯಾನಿಗಳ ದಿಕ್ಕಾದ ತಾಯಿ:

ಈ ಘಟನೆಗಳ ನಂತರ, ಹದಿನಾರನೇ ಶತಮಾನದಲ್ಲಿ ಭಾರತದ ಭೂಪ್ರದೇಶಗಳನ್ನು ತಲುಪಿದ್ದ ಯುರೋಪಿನ ವಿವಿಧ ದೇಶಗಳ ವ್ಯಾಪಾರಿ ನೌಕಾಯಾನಿಗಳು, ತೀರದಲ್ಲಿ ವ್ಯಾಪಾರದ ಮಳಿಗೆ, ದಾಸ್ತಾನು ಕೋಠಿಗಳನ್ನು ಕಟ್ಟಿಕೊಳ್ಳಲು ಮುಂದಾಗಿದ್ದರು. ಯುರೋಪಿನ ಫ್ರಾನ್ಸ್ ದೇಶದ ನಾವಿಕರು ಮಾತೆ ಮರಿಯಳ ಭಕ್ತರು. ಅವರು ಮಾತೆ ಮರಿಯಳನ್ನು `ಸಮುದ್ರದ ನಕ್ಷತ್ರ ಎಂದು ಆದರಿಸುತ್ತಿದ್ದರು.

ಹದಿನೇಳನೇ ಶತಮಾನದಲ್ಲಿ ಪೂರ್ಚುಗೀಸರ ವ್ಯಾಪಾರಿ ಹಡಗೊಂದು ಶ್ರೀಲಂಕಾ (ಸಿಲೋನ) ದ ಕೊಲಂಬೊ ಪಟ್ಟಣದತ್ತ ಸಾಗಿತ್ತು. ಬಂಗಾಲ ಉಪಸಾಗರದಲ್ಲಿ ಬಿರುಗಾಳಿ ಎದ್ದು, ಹಡಗು ಸಂಕಷ್ಟಕ್ಕೆ ಗುರಿಯಾಯಿತು.

ಆ ಸರಕು ಸಾಗಾಟದ ಹಡಗಿನಲ್ಲಿದ್ದ ನಾವಿಕರು ಮತ್ತು ಪ್ರಯಾಣಿಕರು ಅಡ್ಡ ಬಿದ್ದು, ಮಾತೆಮರಿಯಳ ಸಹಾಯವನ್ನು ಯಾಚಿಸಿದರು. ಸಕಾಲದಲ್ಲಿ ಸಹಾಯ ಸಿಕ್ಕರೆ, ಆಕೆಯ ಹೆಸರಿನಲ್ಲಿ ಗುಡಿಯೊಂದನ್ನು ಕಟ್ಟುವುದಾಗಿ ಹರಕೆ ಹೊತ್ತರು.

ತಕ್ಷಣವೇ ಬಿರುಗಾಳಿ ಬೀಸುವುದು ತಪ್ಪಿತು. ಬದುಕುಳಿದ ಅವರು, ದೇವರಿಗೆ ಕೃತಜ್ಞತೆ ಸಲ್ಲಿಸಿ ಹಡಗನ್ನು ಸುರಕ್ಷಿತ ನೆಲೆಗೆ ತಂದು ನಿಲ್ಲಿಸಿದರು. ತೀರಕ್ಕೆ ಬಂದ ಅವರಿಗೆ ತೀರದಲ್ಲಿದ್ದ ಮಾತೆ ಮರಿಯಳ ಗುಡಿಸಲಿನ ಗುಡಿ ಕಂಡಿತ್ತು. ಆ ಗುಡಿಸಲಿನ ಮಾತೆ ಮರಿಯಳ ಗುಡಿ ಇದ್ದ ಸ್ಥಳದಲ್ಲಿ ಕಲ್ಲಿನಲ್ಲಿ ಕಟ್ಟಡ ಕಟ್ಟಿ ಗುಡಿಯ ಜೀರ್ಣೋದ್ಧಾರ ಮಾಡಿದರು.

ಕಾಕತಾಳೀಯ ಎನ್ನವಂತೆ, ಇದೆಲ್ಲಾ ನಡೆದದ್ದು ಮಾತೆ ಮರಿಯಳ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ ಎಂಟರಂದು! ನಂತರದಲ್ಲಿ ಇತ್ತ ಬಂದಾಗಲೆಲ್ಲಾ, ಸುರಕ್ಷಿತ ನೌಕಾಯಾನವನ್ನು ಕೋರಿ ಕೃತಜ್ಞತಾ ಭಾವದಿಂದ ಆದರಿಸುವ ಕ್ರಮವನ್ನು ಅವರು ಅನುಸರಿಸಿದ್ದರು. ಯುರೋಪಿನ ಇನ್ನುಳಿದ ನೌಕಾಯಾನಿಗಳು ಮಾತೆ ಮರಿಯಳನ್ನು ಕಂಡು ತಮ್ಮ ಭಕ್ತಿಯನ್ನು ತೋರತೊಡಗಿದರು.

ಪವಾಡಗಳು ರಾಣಿ:

ನಿಧಾನವಾಗಿ ಪವಾಡಗಳ ಸಂಖ್ಯೆ ಹೆಚ್ಚತೊಡಗಿತು. ಮುಂದೆ ಆ ಆರೋಗ್ಯಮಾತೆ, ಆ ಊರಿನ ತಾಯಿಯಾದಳು ವೆಲಾಂಗಣಿ ಮಾತೆಯಾದಳು. ವೆಲಾಂಗಣಿಯ ಊರು `ಮಗು ಯೇಸುಸ್ವಾಮಿಯನ್ನು ಎತ್ತಿಕೊಂಡು ನಿಂತ ಮಾತೆ ಮರಿಯಳ ಪುಣ್ಯಕ್ಷೇತ್ರವಾಗಿ ರೂಪತಾಳಿತು. ನಂತರದಲ್ಲಿ, ಮಾತೆ ಮರಿಯಳು ದರ್ಶನ ಕೊಟ್ಟ ಸ್ಥಳದಲ್ಲಿ ಪುಟಾಣಿ ಚರ್ಚು ಅಸ್ತಿತ್ವಕ್ಕೆ ಬಂದಿತಂತೆ. ಕಾಲಾನುಕ್ರಮದಲ್ಲಿ ಚರ್ಚಕಟ್ಟಡ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದು, ಸಮುದ್ರದತ್ತ ಮುಖ ಮಾಡಿದ್ದ ಹಳೆಯ ಚರ್ಚಿಗೆ ಅಂಟಿಕೊಂಡಂತೆಯೇ, ೧೯೭೪-೭೫ರ ಅವಧಿಯಲ್ಲಿ, ಅದರ ವಿರುದ್ಧ ದಿಕ್ಕಿನಲ್ಲಿ, ಲ್ಯಾಟಿನ್ ಶಿಲುಬೆಯಾಕಾರದ ಗೋತಿಕ್ ಶೈಲಿಯ ಎರಡು ಮಹಡಿಯ ಚರ್ಚು ನಿರ್ಮಾಣವಾಗಿದೆ. ಈ ನೂತನ ಚರ್ಚಿನಲ್ಲಿನ ಪೂಜಾಂಕಣದ ಮೇಲಿನ ಗೋಪುರ ೮೨ ಅಡಿ ಎತ್ತರವಿದ್ದರೆ, ಮುಂಭಾಗದ ಎರಡು ಗೋಪುರಗಳ ಎತ್ತರ ೯೩ ಅಡಿ ಇದೆ.

ಇಲ್ಲಿ ವೇಲಾಂಗಣಿಯ ಈ ಚರ್ಚಿನಲ್ಲಿ ಮಾತೆ ಮರಿಯಳಿಗೆ ಸ್ಥಳೀಯ ಉಡುಪಿನ ಪದ್ಧತಿಯಂತೆ ಸೀರೆ ಉಡಿಸಿ ಆದರಿಸಲಾಗುತ್ತದೆ. ಅಲ್ಲಿಗೆ ಬರುವ ಭಕ್ತರು ವಿವಿಧ ವಾಹನ ಸೌಕರ್ಯಗಳನ್ನು ಬಳಸಿದರೂ, ಕೆಲವರು ನಡೆದುಕೊಂಡು ಬರುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಭಕ್ತರು ಭಕ್ತಿಯಿಂದ ಕಿವಿ ಚುಚ್ಚಿಸಿಕೊಳ್ಳುವ, ಕೂದಲು ಒಪ್ಪಿಸುವ ಚಟುವಟಿಕೆಗಳು ಜರುಗುತ್ತವೆ. ಕೊನೆಯ ದಿನದಂದು ಮಹಿಳೆಯರು ಮೊದಲು ರಥ ಎಳೆಯುವ ಪರಿಪಾಠವಿದೆ.

ವೇಲಾಂಗಣಿ ಮಾತೆ:

ವೇಲಾಂಗಣಿ ಊರು ಮಾತೆ ಮರಿಯಳು ದರ್ಶನ ಕೊಟ್ಟ ಜಾಗ. ಕನ್ನಡದಲ್ಲಿ ವೇಲಾಂಗಣಿ ಎಂದು ಉಚ್ಚರಿಸಿದರೆ ತಮಿಳು ಭಾಷೆಯಲ್ಲಿ ಅದನ್ನು ವೇಲಾಂಕಣಿ ಎಂದು ಉಚ್ಚರಿಸುತ್ತಾರೆ.
ತಮಿಳು ಭಾಷೆಯ ಈ ವೇಲಾಂಕಣಿಯಲ್ಲಿ ಎರಡು ಪದಗಳಿವೆ. ಮೊದಲ ಪದ `ವೇಳಾಗೆ ಸಮಯ ಅಥವಾ ಕೆಲಸ ಎಂಬ ಅರ್ಥವಿದ್ದರೆ, `ಕಣಿ ಆಗಿರುವ `ಕಣ್ಣಿ (ಕಣ್ಣಿಕೆ) ಎಂದರೆ ಕನ್ಯೆ, ಕುಮಾರಿ, ಮದುವೆಯಾಗದ ಮಹಿಳೆ, ಸ್ತ್ರೀ, ಕನ್ಯಾರಾಶಿ, ತುಂಬಿದ ಯೌವನದವರು ಎಂಬ ಅರ್ಥಗಳಿವೆ.

ಅಲ್ಲಿ ನಡೆದ ಪವಾಡಗಳ ಘಟನಾವಳಿಗಳ ಹಿನ್ನೆಲೆಯಲ್ಲಿ ಸಮಯಕ್ಕಾದವಳು, ಸಮಯಕ್ಕಾದ ಕನ್ಯೆ ಅಂದರೆ ಸಮಯಕ್ಕೆ ಸರಿಯಾಗಿ ಸಹಾಯಮಾಡಿದ ಕನ್ಯಾಮಾತೆ ಮರಿಯ ಎಂಬ ಭಾವ ಹೊಮ್ಮುತ್ತದೆ. ವೇಳೆಗೆ ಆಗುವ ಕನ್ಯೆ ನೆಲೆಸಿರುವ ಊರು ವೇಳಾಂಕಣಿ ಎನ್ನಬಹುದು.

ಪವಾಡದ ಕತೆಗಳಲ್ಲಿ ಬರುವ ಬಾಲಕರಿಗೆ ಆರೋಗ್ಯ ಭಾಗ್ಯ ಕರುಣಿಸಿದ ತಾಯಿಗೆ, ಆರೋಕ್ಯ ಅಣೈ – ಆರೋಗ್ಯ ಮಾದಾ, (ಆರೋಗ್ಯ ತಾಯಿ, ಆರೋಗ್ಯ ಮಾತೆ) ಎಂದು ಜನಪದರು ಕೊಟ್ಟ ಹೆಸರು ಜನಜನಿತವಾಗಿದೆ. ಇಂಗ್ಲಿಷ್ ನಲ್ಲಿ ಅವಳನ್ನು ಅವರ್ ಲೇಡಿ ಆಫ್ ವೇಲಾಂಕಣಿ, ಅವರ್ ಲೇಡಿ ಆಫ್ ಗುಡ್ ಹೆಲ್ತ್ ಎಂದು ಕರೆಯಲಾಗುತ್ತದೆ.

ಪ್ರಶಾಂತವಾಗಿದ್ದ ತಾಣ:

ಒಂದು ಕಾಲದಲ್ಲಿ ಪುಟಾಣಿ ಗ್ರಾಮ. ಗಿಡಮರಗಳಿಂದ ಸಮೃದ್ಧವಾಗಿದ್ದ ನೈಸರ್ಗಿಕ ಪರಿಸರವನ್ನು ಹೊಂದಿದ್ದ ವೇಲಾಂಗಣಿ ಈಗ ಸಂತೆಯ ಜಾಗದಂತಾಗಿದೆ. ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲ ಪ್ರತಿದಿನವೂ ನಡೆಯುವ ದೊಡ್ಡ ಸಂತೆಯಾಗಿಬಿಟ್ಟಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಜನಸಾಗರವೇ ಹರಿದುಬರುತ್ತಿದೆ.

ಬರುವ ಭಕ್ತರ ಸಂಖ್ಯೆ ಹೆಚ್ಚಾದಾಗ, ಕಳೆದ ಶತಮಾನದ ೭೦ನೇ ದಶಕದಲ್ಲಿ ಸಮುದ್ರಕ್ಕೆ ಅಭಿಮುಖವಗಿರುವ ಹಳೆಯ ಚರ್ಚಿನ ಕಟ್ಟಡಕ್ಕೆ ಹೊಂದಿಕೊಂಡಂತೆ ಎರಡು ಅಂತಸ್ತಿನ ದೊಡ್ಡ ಚರ್ಚು ಕಟ್ಟಲಾಗಿದೆ. ಮಾತೆ ಮರಿಯಳು ದರ್ಶನ ಕೊಟ್ಟ ಸ್ಥಳಗಳ ಆಸುಪಾಸಿನಲ್ಲಿ, ಭಾರಿ ಗಾತ್ರದ ಹೊಸ ಹೊಸ ಚರ್ಚುಗಳು ಅಸ್ತಿತ್ವದಲ್ಲಿ ಬಂದಿವೆ. ಇಂದು ವೇಲಾಂಗಣಿ ಊರಿನ ಚಿತ್ರಣವೇ ಬದಲಾಗಿದೆ. ಭಕ್ತಿಯು ಗೌಣವಾಗಿದೆ. ತೋರಿಕೆಯ, ಢಂಬಾಚಾರದ ಭಕ್ತಿಯ ನಡಾವಳಿಗಳು ಹೆಚ್ಚಾಗುತ್ತಿವೆ.
ತಾಯಿಯ ಕೊಳದ ನೀರನ್ನು ಮುಟ್ಟುವಂತಿಲ್ಲ. ಅದಕ್ಕೆ ದಿಗ್ಬಂಧನ ಹಾಕಲಾಗಿದೆ. ಭಕ್ತರ ಅನುಕೂಲಕ್ಕೆ ಕೊಠಡಿಗಳ ಸಮುಚ್ಚಯಗಳು, ಹೊಟೇಲು, ವಸತಿಗೃಹಗಳು ಬಂದಿವೆ. ಇಂದು ಪ್ರತಿವರ್ಷವೂ ಲಕ್ಷಾಂತರ ಜನ ಅಲ್ಲಿಗೆ ಭೇಟಿಕೊಟ್ಟು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾವು ಹೊತ್ತ ಹರಕೆಗಳನ್ನು ತೀರಿಸುತ್ತಿದ್ದಾರೆ.

ಇತಿಹಾಸದಲ್ಲಿನ ಒಂದು ಕಪ್ಪು ಚುಕ್ಕೆ:

ಆ ಕಾಲದಲ್ಲಿ ಎಂಥದೇ ಸುಂಟರಗಾಳಿ, ಚಂಡ ಮಾರುತ ಬೀಸಿ, ಚರ್ಚಿನ ಮುಂದಿನ ಸಮುದ್ರ ಎಷ್ಟೇ ಕೆರಳಿದರೂ, ತೆರೆಗಳು ಮೂಲ ಚರ್ಚಿನ ಪಾವಟಣಿಗಳನ್ನು ಮುಟ್ಟಿ ಹಿಂದಕ್ಕೆ ಹೋಗುತ್ತಿದ್ದವಂತೆ. ಆದರೆ, ಈ ಶತಮಾನದ ಆದಿಯಲ್ಲಿ ೨೦೦೪ರ ಸಾಲಿನ ಡಿಸೆಂಬರ್ ೨೬ ರಂದು ಕ್ರಿಸ್ಮಸ್ ಹಬ್ಬದ ಮರುದಿನ ಕಾಣಿಸಿಕೊಂಡ ಅಪರೂಪದ ಸುನಾಮಿಯ ದೈತ್ಯ ಅಲೆಗಳು, ಗುಡಿಯ ಮೆಟ್ಟಿಲನ್ನು ಮೆಟ್ಟಿ ಮೇಲೆ ಉಕ್ಕಿ ಹರಿದು, ಅಪಾರ ಜೀವ ಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಮಾಡಿದ್ದವು. ಅದೊಂದು ವೇಲಾಂಗಣಿಯ ಗುಡಿಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯ ಕರಾಳ ನೆನಪು.
ಪೂರ್ವದ ಲೂರ್ದ ಪಟ್ಟಣವೆಂಬ ಖ್ಯಾತಿಯ ವೇಲಾಂಗಣಿ ಗೌಜು ಗದ್ದಲದಲ್ಲಿ ಮುಳುಗಿದ್ದರೆ, ಫ್ರಾನ್ಸ್ ದೇಶದ ಲೂರ್ದ ಮಾತೆಯ ಪುಣ್ಯಕ್ಷೇತ್ರ ಲುರ್ದಪಟ್ಟಣ ತನ್ನ ಪ್ರಶಾಂತ ವಾತಾವರಣವನ್ನು ಇನ್ನೂ ಉಳಿಸಿಕೊಂಡಿದೆ. ವೇಲಾಂಗಣಿ ಆರೋಗ್ಯ ಮಾತೆಯ ಮುಂದಿನ ಹಿಂದಿದ್ದ ವಿಶಾಲವಾದ ಬಯಲು ಇಲ್ಲವಾಗಿ, ಅವುಗಳ ಜಾಗದಲ್ಲಿ ಅಂಗಡಿಗಳು ಬಂದು, ಸಮುದ್ರವೇ ಕಾಣದಂತಾಗಿದೆ.

ಎಫ್. ಎಂ. ನಂದಗಾವ

(ಎಫ್. ಎಂ ನಂದಗಾವ್ ವೃತ್ತಿಯಿಂದ ಪತ್ರಕರ್ತರಾದರೂ ಪ್ರವೃತ್ತಿಯಿಂದ ಅವರೊಬ್ಬ ಕ್ರೈಸ್ತ ಜಾನಪದ ಸಂಶೋಧಕ ಎಂಬುವುದು ಅವರು ಇದುವರೆಗೂ ಪ್ರಕಟಿಸಿದ ಕೃತಿಗಳೇ ಹೇಳುತ್ತವೆ. ಆತ್ಮೀಯ ಅಜ್ಜ ಸಾಂತಾಕ್ಲಾಸ್, ಕಿಟ್ಟಿಯೂ ಕ್ರಿಸ್ಮಸ್ ಗೊಂಬೆಗಳು, ಬನ್ನಿ ಬಂಗಾರದ ಹೊಲದಾಗ, ಅನ್ನಮ್ಮ ಬೆಟ್ಟದ ಶಿಲುಬೆ ಯಾತ್ರೆ ಇತ್ಯಾದಿ ಶ್ರೀಯುತರ ಕೃತಿಗಳು).

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram