ಗಾಂಧಿ ಎಂಬ ಬೆಳಕು

Advertisements
Share

ಗಾಂಧಿ ಒಂದು ಶಕ್ತಿ, ಅಹಿಂಸಾವಾದಿ, ಸತ್ಯವೇ ದೇವರೆಂದು ಬಾಳಿದ ದಾರ್ಶನಿಕ, ತತ್ವಜ್ಞಾನಿ, ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರ ನಾಯಕ. ಬದುಕಿನ ಭೂಮಿಯಿಂದ ಪಡೆದ ಆಗಾಧ ಅನುಭವಗಳನ್ನು ವಿಮರ್ಶೆಯ ಒರೆಹಚ್ಚಿ ತನ್ನ ನೈಜ ಬದುಕಿನ ಬಾಳ್ಮೆಗೆ ಮತ್ತು ಇತರರ ಬದುಕಿಗೆ ಒಂದು ಮಾರ್ಗವನ್ನು ಕಂಡುಕೊಂಡಂತಹ ಮಹಾತ್ಮ. ತನ್ನ ಬದುಕಿನ ನ್ಯೂನತೆಗಳ ಹಾಗು ದೌರ್ಬಲ್ಯಗಳ ಅರಿವನ್ನು ಪಡೆದುಕೊಂಡು, ಸರಿಪಡಿಸಿಕೊಂಡು ಸತ್ಯ ಬಾಳನ್ನು ಬದುಕಲು ಸರ್ವಪ್ರಯತ್ನ ಮಾಡಿ ಗೆದ್ದ ಸತ್ಯಯೋಗಿ. ಗೆದ್ದದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟ ಮಾರ್ಗದರ್ಶಿ. ಹೌದು ಗಾಂದೀಜಿಯವರದ್ದು ಒಂದು ಸಂಕೀರ್ಣ ವ್ಯಕ್ತಿತ್ವ. ಒಂದು ಕೋನದಿಂದ ನೋಡಿ, ಗಾಂಧಿ ಎಂಬ ಮಹಾನ್ ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದಷ್ಟು ಆಗಾಧ ಮತ್ತು ವಿಸ್ತಾರ. ಅದಕ್ಕಾಗಿ ಅವರನ್ನು ಪ್ರೀತಿಸುವಷ್ಟೇ ದ್ವೇಷಿಸುವ ಜನರಿದ್ದಾರೆ, ಹೊಗಳುವ ಜನರಷ್ಟೇ ತೆಗಳುವ ಜನರಿದ್ದಾರೆ, ಅರ್ಥ ಮಾಡಿಕೊಂಡ ಜನರಷ್ಟೇ ಅಪಾರ್ಥಮಾಡಿಕೊಂಡವರೂ ಇದ್ದಾರೆ. ಗೊಡ್ಸೆ ಮತ್ತು ಗೊಡ್ಸೆಯ ಹಿಂದಿದ್ದ ಕಾಣದ ಕೈಗಳು ಮತ್ತು ಸಿದ್ಧಾಂತಗಳಿಗೆ ಗಾಂಧೀಜಿ ಇಂದಿಗೂ ಅರ್ಥವಾಗದಿರೋ ಕಾರಣ ಗಾಂಧೀಜಿಯ ವ್ಯಕ್ತಿತ್ವದ ಸಂಕೀರ್ಣತೆ ಮತ್ತು ಅರ್ಥಮಾಡಿಕೊಳ್ಳಲು ವಿಫಲವಾದ ಸಂಕುಚಿತ ಮನಸ್ಸುಗಳು.

ಗಾಂಧೀಜಿಯವರು ನಮ್ಮ ಇಂದಿನ ಪರಿಸ್ಥಿತಿಗೆ ಬಹು ಮುಖ್ಯವಾಗಿ ಬೇಕಾಗಿರುವ ತತ್ವ. ಕೋಮುವಾದ, ಬಂಡವಾಳಶಾಹಿ, ಭಯೋತ್ಪಾದನೆ, ಯುದ್ಧ ಹೀಗೆ ನಾನಾ ರೀತಿಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವಾಗ ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸೆ, ಶಾಂತಿ, ಸತ್ಯ ನಮಗೆ ಅತ್ಯಾವಶಕವಾಗಿ ಬೇಕಾಗಿದೆ. ಇಲ್ಲವಾದರೆ ಇಡೀ ಜಗತ್ತು ನಾಶವಾಗಿಬಿಡುತ್ತದೆ.

ಗಾಂಧೀಜಿಯವರು ಮೂರು ಕಾರಣಗಳಿಗೆ ನನಗೆ ಇಷ್ಟವಾಗುತ್ತಾರೆ. ಒಂದು ಅವರ Charismatic (ವರ್ಚಸ್ವಿ) ನಾಯಕತ್ವ. ಜಾತಿರಾಜಕಾರಣದಿಂದಾಗಲೀ, ಬಲ ಪ್ರಯೋಗ ಅಥವಾ ಹಣಬಲದಿಂದಾಗಲೀ ಅವರು ನಾಯಕರಾಗಿ ಗುರುತಿಸಿಕೊಂಡವರಲ್ಲ. ಅವರ ವ್ಯಕ್ತಿತ್ವವೇ ಅವರ ನಾಯಕತ್ವಕ್ಕೆ ಮೂಲ ಕಾರಣ. ನಡೆನುಡಿಯನ್ನು ಹೊಂದಿಸಿಕೊಂಡು ಬದುಕಿದ ಮನುಷ್ಯನಿಗೆ ಮಾತ್ರ ಈ ರೀತಿಯ ನಾಯಕತ್ವವನ್ನು ಒಲಿಸಿಕೊಳ್ಳಲು ಸಾಧ್ಯ. ಅವರ ನಾಯಕತ್ವಕ್ಕೆ ಮತ್ತೊಂದು ಸಾಕ್ಷಿ ಗಾಂಧೀಜಿಯವರಿಗೆ ಜನರು ಪ್ರತಿಕ್ರಿಯಿಸುತ್ತಿದ್ದ ರೀತಿ. ಗಾಂಧೀಜಿಯವರ ಒಂದೇ ಒಂದು ಕೂಗಿಗೆ ಇಡೀ ದೇಶವೇ ಅವರ ಜೊತೆ ನಿಲ್ಲುತ್ತಿತಂತೆ. ಅಕ್ಷರಸ್ಥರು, ಅನಕ್ಷರಸ್ಥರು, ಹಿಂದೂ, ಮುಸ್ಲಿಂ ,ಕ್ರೈಸ್ತರು, ಜೈನರು, ಬೌದ್ಧರು, ಜಾತಿ, ಮತ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಮರೆತು ಗಾಂಧೀಜಿಯವರಿಗೆ ಜನರು ಪ್ರತಿಕ್ರಿಯಿಸುತ್ತಿದ್ದರಂತೆ. ಗಾಂಧೀಜಿಯವರು ಎಂದೂ ತನ್ನನ್ನು ತಾನೇ ಜನರ ಮೇಲೆ impose (ಹೇರಿ) ಮಾಡಿದವರಲ್ಲ. ಜನರೆಲ್ಲರೂ ಮುಕ್ತ ಮನಸ್ಸಿನಿಂದ ಗಾಂಧೀಜಿಯವರನ್ನು ತಮ್ಮ ನಾಯಕನಾಗಿ ಸ್ವೀಕರಿಸಿದರು. ಅದರಂತೆಯೇ ಗಾಂಧೀಜಿಯವರು ಕೂಡ ಜನರ ನಂಬಿಕೆಯನ್ನ ಹುಸಿಗೊಳಿಸಲಿಲ್ಲ.

ಎರಡನೆಯದು ಗಾಂಧೀಜಿಯವರ ತತ್ವಗಳು. ತಮ್ಮ ತತ್ವ ಸಿದ್ಧಾಂತಗಳನ್ನು ತಮ್ಮ ರಾಜಕೀಯ ಮತ್ತು ಇನ್ನೀತರ ಲಾಭಗಳಿಗೆ ಬಲಿಕೊಡುತ್ತಿರುವ ಜನರ ಮಧ್ಯೆ ಬದುಕುತ್ತಿರುವ ನಾವು ತತ್ವಗಳನ್ನೇ ಬದುಕಾಗಿಸಿಕೊಂಡು, ತಾವು ನಂಬಿದ ತತ್ವಗಳಿಗೆ ಪ್ರಾಣವನ್ನು ಸಹ ಕೊಡಲು ಸಿದ್ಧರಾಗಿದ್ದ ಗಾಂಧೀಜಿ ನಮಗೆ ಆದರ್ಶಪ್ರಾಯರು. ಅಹಿಂಸೆ, ಸತ್ಯ, ಸರ್ವೋದಯ ಹೀಗೆ ನಾನಾ ತತ್ವಗಳನ್ನು ಪ್ರತಿಪಾದಿಸಿದ ಗಾಂಧೀಜಿ ಅವುಗಳನ್ನು ಅಳವಡಿಸಿಕೊಂಡು ಬಾಳಿ ತೋರಿಸಿದ ಶ್ರೇಷ್ಠ ವ್ಯಕ್ತಿಗಳು. ಶ್ರಮವಿಲ್ಲದೆ ಗಳಿಸಿದ ಸಂಪತ್ತು, ನೈತಿಕವಿಲ್ಲದ ವ್ಯವಹಾರ, ಮಾನವೀಯತೆಯಿಲ್ಲದ ವಿಜ್ಞಾನ, ತತ್ವಗಳನ್ನು ಅನುಸರಿಸದ ರಾಜಕೀಯ, ಒಳ್ಳೆಯ ಗುಣಗಳಿರದ ಜ್ಞಾನ, ತ್ಯಾಗವನ್ನು ಮಾಡದಿರುವ ಧರ್ಮ ಮತ್ತು ಆತ್ಮಸಾಕ್ಷಿಯಿಲ್ಲದಿರುವ ಸಂತೋಷ ಹೀಗೆ ಪ್ರತಿಯೊಂದರಲ್ಲಿ ಅನ್ಯಾಯ, ಅನೈತಿಕತೆ, ಹಿಂಸೆ, ಅಸಮಾನತೆಯನ್ನ ವಿರೋಧಿಸಿದ ಗಾಂಧೀಜಿ ತಾನು ಪ್ರತಿಪಾದಿಸಿದ ತತ್ವಗಳಲ್ಲಿ ಸ್ವಷ್ಟತೆ ಇತ್ತು. ಅವು ರಾಜಕೀಯ, ನೈತಿಕ ಮತ್ತು ಧಾರ್ಮಿಕವೂ ಆಗಿದ್ದವು. ಜತೆಗೆ ಸಾಂಪ್ರದಾಯಿಕ, ಆಧುನಿಕ, ಸರಳ ಮತ್ತು ಸಂಕೀರ್ಣವೂ ಆಗಿದ್ದವು. ಮುಖ್ಯವಾಗಿ ಇವೆಲ್ಲವೂ ಗಾಂಧೀಜಿಯವರ ಬದುಕಿನಲ್ಲಿ ಸ್ವಷ್ಟವಾಗಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೇ ಬದುಕಿನಲ್ಲಿ ರೂಢಿಸಿಕೊಂಡು ತತ್ವಗಳಿಂದ ಬದುಕುವುದು ಸಾಧ್ಯವೆಂದು ತೋರಿಸಿಕೊಟ್ಟರು.

ಮೂರನೇದು, ಗಾಂಧೀಜಿಯವರ ಪ್ರಭಾವ. ಗಾಂಧೀಜಿಯವರು ಇಡೀ ಪ್ರಪಂಚವನ್ನು ತಮ್ಮ ತತ್ವ ಆಧರಿಸಿದ ಬದುಕಿನಿಂದ ವಿಸ್ತಾರವಾಗಿ ವ್ಯಾಪಕವಾಗಿ ಪ್ರಭಾವಿಸಿದ್ದಾರೆ. ಗಾಂಧೀಜಿಯವರು ಪ್ರತಿಪಾದಿಸಿದ ತತ್ವಗಳನ್ನು ಅಳವಡಿಸಿಕೊಂಡು ನಡೆಸಿದ ಹೋರಾಟಗಳು ತಾತ್ವಿಕ ಕೊನೆಯನ್ನು ಮುಟ್ಟಿದ ಉದಾಹರಣೆಗಳು ನಮ್ಮ ಮುಂದಿವೆ. ಎಷ್ಟೋ ಮಹನೀಯರು ಗಾಂಧೀಜಿಯವರ ತತ್ವಗಳನ್ನು ಅನುಸರಿಸಿ ಬಾಳಿ ಜಗಕ್ಕೆ ಬೆಳಕಾಗಿದ್ದಾರೆ. ಈ ನಿಟ್ಟಿನಲ್ಲಿ ಗಾಂಧೀಜಿಯವರಿಂದ ಸ್ಫೂರ್ತಿ ಪಡೆದ ಕೆಲ ಮಹನೀಯರನ್ನು ಮತ್ತು ಅವರ ಹೇಳಿಕೆಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನ್ನಿಸುತ್ತದೆ.

ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರು ಈ ರೀತಿ ಹೇಳುತ್ತಾರೆ “ದಬ್ಬಾಳಿಕೆಯನ್ನು ಎದುರಿಸುವಾಗ ಗಾಂಧಿಯವರ ವೈಯಕ್ತಿಕ ತ್ಯಾಗ ಮತ್ತು ಸಮರ್ಪಣೆಯ ಉನ್ನತ ಉದಾಹರಣೆಯು ಎಲ್ಲಾ ಮಾನವಕುಲಕ್ಕೆ ಒಂದು ಉದಾಹರಣೆಯಾಗಿದೆ. ಅವರ ಜೀವನ ಕಥೆಯು ನ್ಯಾಯಕ್ಕಾಗಿ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ.” ರಕ್ತ ಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ ಎಂದು ಗಾಂಧೀಜಿಯವರನ್ನು ಕುರಿತು ಅಲ್ಬರ್ಟ್ ಐನ್ ಸ್ಟೀನ್ ಹೇಳುತ್ತಾರೆ.

ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಅಮೇರಿಕಾದ ವರ್ಣಭೇಧ ನೀತಿಯ ವಿರುದ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು. ಅವರು ಗಾಂಧೀಜಿಯ ಬಗ್ಗೆ ಈ ರೀತಿ ಹೇಳುತ್ತಾರೆ, ಗಾಂಧೀಜಿಯವರು ನಮಗೆ ಅನಿವಾರ್ಯ. ಮಾನವಕುಲದ ಉದ್ಧಾರವಾಗಬೇಕಾದರೆ ಗಾಂಧೀಜಿಯವರನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇಡೀ ಮಾನವಕುಲ ಶಾಂತಿ ಮತ್ತು ಸಾಮರಸ್ಯ ಜಗತ್ತಿನೆಡೆಗೆ ವಿಕಸಗೊಳ್ಳುವ ದೃಷ್ಟಿಯಿಂದ ಮಹಾತ್ಮ ಗಾಂಧೀಜಿಯವರು ಬದುಕಿದರು, ಅಲೋಚಿಸಿದರು ಮತ್ತು ಕಾರ್ಯನಿರ್ವಹಿಸಿದರು. ಒಳಗೂ ಹೊರಗೂ ಎಂಬ ಬ್ಲಾಗ್ನಿಂದ ಕೆಳಗಿನ ಸಾಲುಗಳನ್ನು ಉಲ್ಲೇಖಿಸುತ್ತಿದ್ದೇನೆ. ಸಂಧ್ಯಾರೆಡ್ಡಿ ಅನುವಾದಿಸಿರುವ `ಬರ್ಕ್ ವೈಟ್ ಕಂಡ ಭಾರತ’ ಕೃತಿಯಿಂದ ಈ ಘಟನೆಯನ್ನು ಉಲ್ಲೇಖಿಸುತ್ತಿದ್ದೇನೆ. ಅಮೆರಿಕದಿಂದ ಗಾಂಧಿಯವರ ಫೋಟೋ ತೆಗೆಯುವುದಕ್ಕಾಗಿ ಬಂದ ಪ್ರಸಿದ್ಧ ಫೋಟೋ ಜರ್ನಲಿಸ್ಟ್ ಮಾರ್ಗರೆಟ್ ಬರ್ಕ್ ವೈಟ್ ಗಾಂಧಿ ಅವರ ಜತೆ ಕಳೆದ ಕ್ಷಣಗಳನ್ನು ಕುರಿತು ಬರೆದಿದ್ದಾರೆ. ಗಾಂಧಿಯ ಕೆಲ ಫೋಟೋಗಳಿಗಾಗಿ ಬಂದು ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತ ಸುತ್ತಾಡಿದ ಈಕೆ ಗಾಂಧಿಜಿಯವರ ಅಂತಿಮ ಸಂದರ್ಶನ ಮಾಡಿದ ಏಕೈಕ ವ್ಯಕ್ತಿ. ಈ ಸಂದರ್ಶನಕ್ಕೆ ಹೋದಾಗ ಕಂಡ ಚಿತ್ರಣವನ್ನು, ಮಾತು ಆರಂಭಿಸಿದ ರೀತಿಯನ್ನು ಹೀಗೆ ಕಟ್ಟಿ ಕೊಡುತ್ತಾರೆ ಬರ್ಕ್ ವೈಟ್: `ತಲೆಯ ಮೇಲೆ ಒಂದು ಸ್ಟ್ರಾಹ್ಯಾಟ್ ಹಾಕಿಕೊಂಡು ಅದರ ಪಟ್ಟಿಯನ್ನು ಗಲ್ಲದ ಬಳಿ ಕಟ್ಟಿಕೊಂಡರು. ಆಗ ನಾನು ನನ್ನ ಮೊದಲ ಪ್ರಶ್ನೆ ಕೇಳಿದೆ. ಆ ಸಂದರ್ಭಕ್ಕೆ ಆ ಪ್ರಶ್ನೆ ತುಂಬಾ ಸಿಲ್ಲಿಯಾಯಿತೇನೋ ಅನ್ನಿಸಿತ್ತು. ಆದರೆ ಈಗ ಹಾಗನ್ನಿಸುತ್ತಿಲ್ಲ. `ನಾನು ನೂರಾ ಇಪ್ಪತ್ತೈದು ವರ್ಷ ಬದುಕುತ್ತೀನಿ ಎಂದು ನೀವು ಯಾವಾಗಲೂ ಹೇಳುತ್ತಿರುತ್ತೀರಿ. ಯಾವ ಭರವಸೆಯಿಂದ ಹಾಗೆ ಹೇಳುತ್ತೀರಿ’ ಎಂದೆ. ಈ ಪ್ರಶ್ನೆಗೆ ಗಾಂಧಿಯವರು ನೀಡಿದ ಉತ್ತರಕ್ಕೆ ನಾನು ಬೆಚ್ಚಿ ಬಿದ್ದೆ. ಅವರು ಹೇಳಿದರು, I have lost the hope ಯಾಕೆ ಹೀಗೆ ಎಂದು ಕೇಳಿದೆ. ಗಾಂಧಿ ಹೇಳಿದರು – `ಯಾಕೆಂದರೆ ಈ ಜಗತ್ತಿನಲ್ಲಿ ಏನೇನೋ ಭಯಂಕರವಾದುದೆಲ್ಲಾ ಆಗುತ್ತಿದೆ. ಅಂಧಕಾರ, ಹುಚ್ಚಾಟಗಳು ತುಂಬಿದ ಈ ಜಗತ್ತಿನಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ. ನನಗೆ ಬದುಕುವ ಆಸೆಯಿಲ್ಲ ಎಂದರು’. ಗಾಂಧಿ ಈ ಮಾತು ಹೇಳಿದ್ದು ಯಾಕೋ? ಈ ಸಂದರ್ಶನ ನಡೆದ ಕೆಲವೇ ಕೆಲವು ಗಂಟೆಗಳ ಬಳಿಕ ಅವರು ನಾಥುರಾಮ್ ಗೋಡ್ಸೆಯ ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಬರ್ಕ್ ವೈಟ್ ಕಂಡ ಬೆಳಕು ನಂದಿ ಹೋಯಿತು. ಈ ಬಗ್ಗೆ ಬರ್ಕ್ ವೈಟ್ ಹೀಗೆ ಬರೆಯುತ್ತಾರೆ; `ಆಟಂ ಬಾಂಬನ್ನು ಸಹ ಅಹಿಂಸೆಯಿಂದಲೇ ಎದುರಿಸಬಹುದು ಎಂದು ನಂಬಿದ್ದ ಈ ವ್ಯಕ್ತಿ ರಿವಾಲ್ವರ್ನ ಬುಲೆಟ್ಗೆ ಬಲಿಯಾಗಿದ್ದ’. (ಒಳಗೂ ಹೊರಗೂ ಬ್ಲಾಗ್)

ಟೈಮ್ ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಒಂದು. ೧೯೨೩ರ ಮಾರ್ಚ್ ತಿಂಗಳಿಂದ ಪ್ರಕಟವಾಗುತ್ತಿರುವ ಅಮೆರಿಕದ ಸಾಪ್ತಾಹಿಕ ಇದು. ಮಹಾತ್ಮ ಗಾಂಧೀಜಿ ಈ ಪತ್ರಿಕೆಯ ಮುಖ ಪುಟದಲ್ಲಿ ಮೂರು ಬಾರಿ ಕಾಣಿಸಿಕೊಂಡರು. ಮೊದಲ ಬಾರಿ ಕಾಣಿಸಿಕೊಂಡಿದ್ದು ಮಾರ್ಚ್ ೩೧, ೧೯೩೦ರ ಸಂಚಿಕೆಯಲ್ಲಿ. ಪಿಂಚ್ ಆಫ್ ಸಾಲ್ಟ್ ಹೆಸರಿನ ಲೇಖನದಲ್ಲಿ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದ ಕುರಿತು ಲೇಖನವಿದೆ. ಉಪ್ಪಿನ ಕರ ವಿರೋಧಿಸಿ ಗಾಂಧೀಜಿ ನೇತೃತ್ವದಲ್ಲಿ ನಡೆದ ದಂಡೆ ಯಾತ್ರೆ ಮತ್ತು ಅದರ ಪ್ರಭಾವವನ್ನು ಈ ಲೇಖನ ವಿವರಿಸುತ್ತದೆ. `ಗಾಂಧಿ ಭಯ ಹುಟ್ಟಿಸುತ್ತಾರೆ. ಜಗತ್ತಿನ ಇತಿಹಾಸದಲ್ಲೇ ಅತಿದೊಡ್ಡ ಪ್ರಯೋಗ ನಡೆಸುತ್ತಿರುವ ವ್ಯಕ್ತಿ ಅವರು’ ಎಂದು ಬ್ರಿಟಿಷ್ ಅಧಿಕಾರಿ ಲಾರ್ಡ್ ಲಾಯ್ಡ್ ಹೇಳಿರುವ ಮಾತು ಇಲ್ಲಿ ಉಲ್ಲೇಖಿತವಾಗಿದೆ. ಜನವರಿ ೫, ೧೯೩೧ರ ಸಂಚಿಕೆಯ ಮುಖಪುಟದಲ್ಲಿ ಗಾಂಧಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ `ವರ್ಷದ ವ್ಯಕ್ತಿ’ ಎಂದು ಪತ್ರಿಕೆ ಗುರುತಿಸಿ ಮುಖಪುಟ ಲೇಖನವನ್ನು ಪ್ರಕಟಿಸಿದೆ. ಗಾಂಧಿಯನ್ನು `ಮಹಾತ್ಮ’, `ಸಂತ’ ಎಂದು ಕರೆದ ಪತ್ರಿಕೆ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿಯನ್ನು ಕೊಂಡಾಡಿದೆ. ಮೂರನೆ ಬಾರಿಗೆ ಜೂನ್ ೩೦, ೧೯೪೭ರ ಸಂಚಿಕೆಯ ಮುಖಪುಟದಲ್ಲಿ ಗಾಂಧೀ ಕಾಣಿಸಿಕೊಂಡರು. ಭಾರತದ ಸ್ವಾತಂತ್ರ್ಯ ಘೋಷಣೆಗೆ ಇನ್ನು ೫೦ ದಿನಗಳಿರುವುದನ್ನು ನೆನಪಿಸುತ್ತಲೇ ಗಾಂಧೀ ಹೋರಾಟದ ಹಲವು ಸೂಕ್ಷ್ಮಗಳನ್ನು ಚಿತ್ರಿಸುತ್ತದೆ. ಇದೇ ಲೇಖನದಲ್ಲಿ ಗಾಂಧೀ `ನಾನೊಬ್ಬ ಧಾರ್ಮಿಕ ನಾಯಕ, ರಾಜಕೀಯ ನಾಯಕನಲ್ಲ’ ಎಂದು ಹೇಳಿದ್ದನ್ನು ದಾಖಲಿಸಲಾಗಿದೆ. `ಹಾಗೂ ನಾನು ರಾಜಕೀಯದಲ್ಲಿ ಭಾಗಿಯಾಗಿದ್ದೇನೆ ಎಂದಾದರೆ, ಅದರರ್ಥ ಇಂದು ರಾಜಕೀಯ ಹಾವಿನ ಹಾಗೆ ನಮ್ಮನ್ನು ಸುತ್ತಿಕೊಂಡಿದ್ದು, ಅದರಿಂದ ಬಿಡಿಸಿಕೊಳ್ಳುವುದು ಕಷ್ಟವಾಗಿದೆ ಎಂದಷ್ಟೆ. ನಾನು ಹಾವಿನ ಜತೆ ಕುಸ್ತಿಯಾಡಲು ಬಯಸುತ್ತೇನೆ. ಮತ್ತು ರಾಜಕೀಯದಲ್ಲಿ ಧಾರ್ಮಿಕತೆಯನ್ನು ತರಬಯಸುತ್ತೇನೆ’ ಎಂಬ ಹೇಳಿಕೆ ಉಲ್ಲೇಖಿತವಾಗಿದೆ. ಹಿಂದಿನ ಎರಡು ಸಂಚಿಕೆಗಳಿಗಿಂತ ಹೆಚ್ಚಾಗಿ ಈ ಸಂಚಿಕೆಯ ಲೇಖನದಲ್ಲಿ ಗಾಂಧಿ ವ್ಯಕ್ತಿತ್ವದ ಸಮಗ್ರ ಚಿತ್ರಣ ದೊರೆಯುತ್ತದೆ ಎಂದರೆ ತಪ್ಪಿಲ್ಲ. (ಒಳಗೂ ಹೊರಗೂ ಬ್ಲಾಗ್)

ಕೊನೆಗೆ ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಹೀಗೆ ಗಾಂಧೀಜಿಯವರು ಸಪ್ತ ಪಾತಕಗಳಿಂದ ಪಟ್ಟಿ ಮಾಡಿ ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರವಿರಬೇಕು ಎಂದು ಹೇಳಿದ್ದರು. ಆದರೆ ವಿಪರ್ಯಾಸವೆಂದರೆ ಭಾರತದಲ್ಲಿ ತತ್ವರಹಿತ ರಾಜಕಾರಣ ರಾರಾಜಿಸುತ್ತಿದೆ, ಸಂಪತ್ತು ಕೆಲವರ ಕೈಗಳಲ್ಲಿ ಮಾತ್ರ ಸಂಗ್ರಹವಾಗುತ್ತಿದೆ. ಹೀಗೆ ಗಾಂಧೀಜಿಯ ಆದರ್ಶಗಳ ತದ್ವಿರುದ್ಧವಾದ ಕ್ರಿಯೆಗಳು ಈಗ ನಡೆಯುತ್ತಿರುವುದರಿಂದ ಅದನ್ನು ತಿದ್ದಿ ಸರಿಪಡಿಸಿಕೊಳ್ಳುವ ಜರೂರತೆ ನಮಗೆ ಬೇಕಾಗಿದೆ. ಆದ್ದರಿಂದ ಗಾಂಧೀಜಿ ಎಂಬ ಸಂತನ ಸ್ಮರಣೆ, ಅವರ ತತ್ವಗಳ ಅರಿವಿನ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು.

ಜೋವಿ

(ಫಾದರ್ ವಿನೋದ್ ಪಾಲ್ ಯೇ.ಸ. ಮೂಲತಃ ಹಾರೋಬೆಲೆ ಊರಿನವರು. ದನಿ ಮಾಧ್ಯಮ ಮನೆಯ ಸ್ಥಾಪಕರು. ಹವ್ಯಾಸಿ ಬರಹಗಾರರು. ಪ್ರಸ್ತುತ ಮಾನ್ವಿ ಎಂಬ ಚಿಕ್ಕ ಪಟ್ಟಣದಲ್ಲಿರುವ ಲೊಯೋ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.)

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram