ಇದೇ ಅಕ್ಟೋಬರ್ ೭ ರಂದು ಆಚರಿಸುವ ಜಪಮಾಲೆ ಮಾತೆ ಹಬ್ಬವನ್ನು ಅಂದು ಮಾತ್ರ ಆಚರಿಸಿದರೆ ಸಾಲದು, ಇಡೀ ಅಕ್ಟೋಬರ್ ಮಾಸವನ್ನೇ ಆಕೆಯ ಮಾಸವನ್ನಾಗಿ ಆಚರಿಸುವುದು ಉತ್ತಮ. ಪ್ರತಿದಿನ ಜಪಸರ ಹೇಳುವುದರೊಂದಿಗೆ ಹಬ್ಬವನ್ನು ಆಚರಿಸಿದರೆ ಮಾತೆಯ ಪ್ರೀತ್ಯಾದಾರಗಳಿಗೆ, ಅನುಗ್ರಹಗಳಿಗೆ ನಾವು ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ಈ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂರು ಮುಖ್ಯ ವಿಧಾನಗಳು ಈ ಕೆಳಗಿನಂತಿವೆ.
ಮೊದಲನೆಯ ವಿಧಾನ
ಜಪಸರ ಮಾತೆಯ ಮಾಸವನ್ನು ಆಚರಿಸುವ ಮೊದಲನೆಯ ವಿಧಾನವೇ, ಮಾತೆ ಮರಿಯಮ್ಮನವರಿಗೆ ಪ್ರೀತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುವುದು. ಆಕೆ ನಮ್ಮೆಲ್ಲರ ಪ್ರೀತಿಯ ಮಾತೆ ಹಾಗು ಪೋಷಕಳೂ ಆಗಿರುವುದರಿಂದ ಎಲ್ಲರೂ ಪೂಜ್ಯಭಾವದಿಂದ ಆಕೆಯನ್ನು ಗೌರವಿಸಬೇಕಾಗಿದೆ. ಮಾತೆಯ ಮಹಿಮೆ, ತೇಜಸ್ಸು, ವರ್ಚಸ್ಸು, ಪ್ರಭಾವ ಮತ್ತು ಆಕೆಯ ಉಪಕಾರಗಳನ್ನು ನಿತ್ಯವೂ ಸ್ಮರಿಸುತ್ತ, ಹೃನ್ಮನಗಳನ್ನು ತಣಿಸುವ ಗೀತೆಗಳನ್ನು ಹಾಡುವುದರ ಮೂಲಕ ಆಕೆಯನ್ನು ನಿತ್ಯ ಮಹಿಮೆ ಪಡಿಸುವುದು. ಸುವಾಸನೆ ಬೀರುವ ಸುಮಗಳಿಂದ ಭೂಷಿತಳಾಗಿ ಚಂದ್ರನಂತೆ ಶೋಬಿಸುವ ಆಕೆಯ ಸ್ವರೂಪದ ಮುಂದೆ ಕೈಜೋಡಿಸಿ ಪ್ರಾರ್ಥನೆ ಸಲ್ಲಿಸಬೇಕು. ಭಕ್ತರಲ್ಲಿ ಅಂತಹ ಸದೃಡ ವಿಶ್ವಾಸ, ಭಾವನೆಗಳು, ಶಕ್ತಿಯುತ ಪ್ರಾರ್ಥನೆಗಳು, ಸೃಜನಾತ್ಮಕ ಮನಸ್ಸುಗಳು, ಆತ್ಮವಿಶ್ವಾಸ ಮೂಡದಿದ್ದರೆ, ಅವರು ಮಾತೆಯ ಅನುಗ್ರಹಗಳಿಗೆ ಅಪಾತ್ರರು, ಆಕೆಯ ಮಕ್ಕಳೆನಿಸಿಕೊಳ್ಳಲು ಸಾಧ್ಯವೇ ಇಲ್ಲ. ಸ್ವರ್ಗದಲ್ಲೂ ಭುವಿಯಲ್ಲೂ ಉನ್ನತ ಪರಮಾಧಿಕಾರ ಹಾಗು ಮಹಿಮೆ ಪ್ರತಾಪವನ್ನು ಹೊಂದಿರುವ ಆಕೆ ಸ್ವರ್ಗದ ಮಹಾ ದಂಡನಾಯಕಿ. ಅಂತಹ ದಿವ್ಯ ಮಹಿಮೆ ಪ್ರತಾಪವುಳ್ಳ ನಾಯಕಿಯ ಪ್ರೀತಿಯ ಕರೆಗೆ ಮಣಿದು, ಆಕೆಯ ಸ್ವರೂಪದ ಮುಂದೆ ನಮ್ಮನ್ನೇ ಭಕ್ತಿಭಾವದಿಂದ ಅರ್ಪಿಸಿಕೊಳ್ಳುವಂತ ಸುಸ್ಥಿರ ಮನಸ್ಸು, ಆತ್ಮವಿಶ್ವಾಸ, ದೃಢನಂಬಿಕೆ ನಮ್ಮಲ್ಲಿ ಮೂಡದಿದ್ದಲ್ಲಿ ನಾವು ಮಾತೆ ಮರಿಯಳ ಭಕ್ತರು ಎನಿಸಿಕೊಳ್ಳಲು ಆಗದು ಮತ್ತು ಆಕೆಗೆ ಸೇವೆಸಲ್ಲಿಸಲೂ ಆಗದು. ನಮ್ಮ ಜನ್ಮದಿಂದಲೂ ಸರ್ವಸ್ವವನ್ನು ದಯಪಾಲಿಸಿರುವ ಆಕೆ ಅತ್ಯಂತ ದಯಾಶೀಲಳು, ವಿನಯಶೀಲಳು. ಆಕೆಯಿಂದ ಯಥೇಚ್ಚವಾದ ವರಗಳನ್ನು ಪಡೆದಿರುವ ನಾವೆಲ್ಲರೂ ಧನ್ಯರೆ. ಆಕೆಯ ಮಹಿಮಾ ಪ್ರತಾಪದಿಂದ ಅನೇಕ ಪವಾಡಗಳನ್ನು, ಅದ್ಭುತಗಳನ್ನು ಕಂಡಿದ್ದೇವೆ. ಆಕೆಯಿಂದ ಎಷ್ಟೋ ವರದಾನಗಳನ್ನು ಪಡೆದಿದ್ದೇವೆ. ಆದರೆ ಅವುಗಳಿಗೆ ಪ್ರತಿಯಾಗಿ ನಾವೇನು ನೀಡಲು ಸಾಧ್ಯ? ಆಕೆಯನ್ನು ಭಕ್ತಿಪೂರ್ವಕವಾಗಿ ನಮಿಸಿ ಗೌರವಿಸುವುದೇ ಆಕೆಗೆ ನಾವು ಸಲ್ಲಿಸುವ ಪ್ರಮಾಣಿಕಬದ್ಧ ಕಾಣಿಕೆಗಳು. ಮಹಾ ಸ್ವರ್ಗದೊಡತಿಯ ಮಹಿಮೆಯು ಅಪಾರ, ಆಕೆಗೆ ನಮ್ಮ ಮೇಲಿನ ಪ್ರೀತಿಯೂ ಅಗಾದ. ಆದ್ದರಿಂದ ಜಗತ್ತಿನಲ್ಲಿ ಆಕೆಯ ಮಹಿಮೆ ಪ್ರತಾಪವು ಎತ್ತರದ ಸ್ತರದಲ್ಲಿ ಮೊಳಗಲು ನಾವು ಆಕೆಯ ಪ್ರಾಮಾಣಿಕ ಸೇವಕರಾಗಿ ದುಡಿಯಬೇಕು. ನಮ್ಮೊಳಗೆ ಭ್ರಾತೃತ್ವ ಸೇತುವೆಯು ಭದ್ರವಾಗಿ ಬೆಸೆದು ಕ್ರಿಸ್ತಾಗ್ನಿಗಳಾಗಿ ಪ್ರಜ್ವಲಿಸುತ್ತ ನಮ್ಮನ್ನು ಪ್ರಾಮಾಣಿಕ ಸಾಕ್ಷಿಗಳಾಗಿ ಕಾಯಾ ವಾಚಾ ಆಕೆಗೆ ಅರ್ಪಿಸಿಕೊಳ್ಳಬೇಕು.
ಈ ಅಕ್ಟೋಬರ್ ತಿಂಗಳು ಆಕೆಗಾಗಿಯೇ ಮೀಸಲಾದ ವಿಶೇಷ ತಿಂಗಳು. ಈ ತಿಂಗಳಿನಲ್ಲಿ ಪ್ರತಿದಿನ ಜಪಸರ ಹೇಳವುದರ ಮೂಲಕ ಆಕೆಗೆ ಕೃತಜ್ಞತೆ ಸಲ್ಲಿಸೋಣ, ಜಪಸರದ ಮೂಲಕ ಆಕೆಯನ್ನು ಮಹಿಮೆ ಪಡಿಸೋಣ. ಇಲ್ಲದಿದ್ದಲ್ಲಿ ನಾವು ಅಪ್ರಮಾಣಿಕರೇ ಆಗುತ್ತೇವೆ. ಆಕೆಯಿಂದ ಯಾವುದೇ ಅನುಗ್ರಹಗಳನ್ನು ಪಡೆಯಲು ನಾವು ಅನರ್ಹರು. ಪ್ರತಿ ದಿನ ಮೂರು ಸಲ ಚರ್ಚ್‌ನಲ್ಲಿ ಮೊಳಗುವ ಘಂಟೆಯ ನಿನಾದವು ಆಕೆಯನ್ನು ಸ್ಮರಿಸುವಂತೆ ನಮ್ಮನ್ನು ನೆನಪಿಸುತ್ತದೆ. ಮನದಲ್ಲೇ ಆಕೆಯನ್ನು ಸ್ಮರಿಸೋಣ, ಗೌರವಿಸೋಣ. ಅದೂ ಅಲ್ಲದೆ ಪ್ರತಿ ಶನಿವಾರವೂ ಆಕಗೆ ಮುಡಿಪಾದ ದಿನವೆಂದು ಪರಿಗಣಿಸಲಾಗಿದೆ.
ಅಂದು ಆಕೆಯನ್ನು ವಿಶೇಷ ವಿಧದಲ್ಲಿ ಗೌರವಿಸಿ ಮಹಿಮೆ ಪಡಿಸುವುದು ಸೂಕ್ತವಾಗಿದೆ. ಇದನ್ನು ಹೊರತು ಪಡಿಸಿ ಪತಿ ತಿಂಗಳೂ ಆಕೆಯ ಹೆಸರಿನಲ್ಲಿ ಒಂದೊಂದು ಹಬ್ಬವನ್ನ್ಲು ಆಚರಿಸುತ್ತೇವೆ. ಅಂತೆಯೇ ವರ್ಷದಲ್ಲಿ ಒಂದು ತಿಂಗಳನ್ನಾದರೂ ನಮ್ಮನ್ನು ಆಕೆಗೆ ಸಮರ್ಪಿಸಿಕೊಂಡು ಮಹಿಮೆಪಡಿಸುವುದು ನಮ್ಮ ಕರ್ತವ್ಯವಲ್ಲವೇ? ಜಪಸರ ಮಾತೆಗೆ ಸಂಬಂಧಿಸಿದ ಪವಿತ್ರ ದಿನಗಳನ್ನು ಹೊರತುಪಡಿಸಿ ಈ ಅಕ್ಟೋಬರ್ ತಿಂಗಳಿನಲ್ಲಿ ಇತರೆ ಯಾವುದೇ ವಿಶೇಷ ಹಬ್ಬಗಳು ಇರುವುದಿಲ್ಲ. ಆದ್ದರಿಂದ ಈ ತಿಂಗಳಿನಲ್ಲಿ ಆಕೆಯನ್ನು ವಿಶೇಷವಾಗಿ ಗೌರವಿಸುವುದು ಸರ್ವವಿಧದಲ್ಲೂ ಯುಕ್ತವಾದುದೆ. ಆಕೆಯ ಕೋಮಲ ಪಾದಗಳಿಗೆ ಶ್ವೇತ ವರ್ಣದ ಲಿಲ್ಲಿ ಪುಷ್ಪಗಳನ್ನು ಅರ್ಪಿಸುವುದು, ಇಂಪಾದ ಗೀತೆಗಳನ್ನು ಹಾಡುವುದು, ಹೀಗೆ ನಮ್ಮ ಭಕ್ತಿಭಾವದ ತೈಲಾಧಾರೆಯನು ಮುಂದೆ ಹರಿಸುತ್ತ ಆಕೆಯನ್ನು ಮಹಿಮೆ ಪಡಿಸಲು ಪ್ರಯತ್ನಿಸೋಣ.
ಎರಡನೇ ವಿಧಾನ
ಜಪಸರ ಮಾತೆಯ ಮಾಸವನ್ನು ಆಚರಿಸಬಹುದಾದ ಎರಡನೇ ವಿಧಾನವೇ ಈ ಅಕ್ಟೋಬರ್ ತಿಂಗಳಿನ ಪ್ರತಿ ದಿನವೂ ಆಕೆಯ ಪುಣ್ಯ ಕಾರ್ಯಗಳನ್ನು, ಪವಾಡಗಳನ್ನು ಸ್ಮರಿಸುವುದು ಮತ್ತು ಧ್ಯಾನಿಸುವುದು. ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಿಕೊಂಡು ನಾವೇ ನಮ್ಮ ವದನ ಮತ್ತು ಶಾರೀರಿಕ ಅಸ್ತವ್ಯಸ್ತವನ್ನು ಸರಿಪಡಿಸಿಕೊಳ್ಳುವಂತೆ ನಮ್ಮ ಆಂತರಿಕ ದೋಷಗಳನ್ನು ಸಹ ನಾವೇ ತಿದ್ದಿಕೊಳ್ಳಬೇಕಾಗಿದೆ. ನಾವು ಮಾಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮಾತೆ ಮರಿಯಮ್ಮನವರೂ ಸಹ ನಮ್ಮೊಂದಿಗೆ ಕೈಜೋಡಿಸುವರು. ನಮ್ಮ ಎಲ್ಲಾ ಆಂತರಿಕ ಭಾವನೆಗಳಿಗೆ, ಆಶೋತ್ತರಿಗಳಿಗೆ ನಮ್ಮ ಆಪ್ತ ಸಂಗಾತಿಯಾಗಿ ಸಕಾರಾತ್ಮಕವಾಗಿ ಸ್ಪಂದಿಸುವವರೇ, ಮಾತೆ ಮರಿಯಮ್ಮನವರು.
ನಾವು ಮಾಡುವ ಎಲ್ಲಾ ಧರ್ಮಕಾರ್ಯಗಳಿಗೆ ಪರಿಶ್ರಮಕ್ಕೆ ದೇವರಿಂದಲೇ ಉದಾತ್ತವಾದ ಪ್ರತಿಫಲ ಹರಿದು ಬರುವುದು. ಅದರ ಜೊತೆಗೆ, ಪ್ರಭು ಕ್ರಿಸ್ತರು ನಮ್ಮಲಿರುವ ಭಕ್ತಿ ವಿಶ್ವಾಸವನ್ನು ಒರೆಹಚ್ಚಿ ನಮ್ಮ ಬೇಡಿಕೆಗಳನ್ನು ಮಾತೆಯ ಮೂಲಕ ಮಾನ್ಯ ಮಾಡುವರು. ಮಾನವನ ದುರ್ಬಲ ಮನಸ್ಸಿನಲ್ಲಿ ಮನೆ ಮಾಡಿರುವ ಅವಿಶ್ವಾಸ ಮತ್ತು ಕುಂದು ಕೊರತೆಗಳನ್ನು ತೆಗೆದು ಹಾಕಲು ಅವರು ಸಹಾಯ ಮಾಡುವರು. ಅವರ ನೆರವಿನ ಅಗತ್ಯವಿದ್ದರೆ, ಮೊದಲು ನಾವು ಮಾತೆ ಮರಿಯಮ್ಮನವರಲ್ಲಿ ದೀನಭಾವದಿಂದ ನಡೆದುಕೊಳ್ಳುವುದು ಅಗತ್ಯ. ಎಲ್ಲಕ್ಕೂ ಮಿಗಿಲಾಗಿ ನಮ್ಮ ವಿಶ್ವಾಸವೇ ಮೂಲದ್ರವ್ಯ. ನಾವು ಹೊಂದಿರುವ ವಿಸ್ವಾಸವು ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುವ ದೊಡ್ಡ ಅಧ್ಯಾತ್ಮಿಕ ಭಂಡಾರವೇ ಆಗಿದೆ.
ಮಾತೆಯ ಮಾಸವನ್ನು ಉತ್ತಮವಾಗಿ ಆಚರಿಸುವ ವಿಧಾನ
(೧) ಮಾತೆಗೆ ಸಮರ್ಪಿತವಾದ ಈ ವಿಶೇಷ ತಿಂಗಳಿನಲ್ಲಿ ಪ್ರತಿ ಶನಿವಾರವೂ ಸಾಮೂಹಿಕವಾಗಿ ಜಪಸರ ಪ್ರಾರ್ಥನೆಗಳಲ್ಲಿ ಭಾಗವಹಿಸಬೇಕಾಗಿದೆ ಮತ್ತು ಜಪಸರ ಮಾತೆಯನ್ನು ಮಹಿಮೆಪಡಿಸಬೇಕಾಗಿದೆ. ನಮ್ಮ ಮನೆ ಮಠಗಳಲ್ಲಿ ಸರಳವಾಗಿ ಆಚರಿಸುವ ವಿಧಾನವನ್ನು ನಾವೇ ಅಳವಡಿಸಿಕೊಳ್ಳಬಹುದು. ಮನೆಯಲ್ಲಿ ಒಂದು ಪೀಠದ ಮೇಲೆ ದೇವ ಮಾತೆಯ ಸ್ವರೂಪ/ಭಾವಚಿತ್ರವನ್ನು ಸ್ಥಾಪಿಸುವುದು, ಪೀಠವನ್ನು ಸುಗಂಧಭರಿತ ಹೂಗಳಿಂದ, ಹೂ ಕುಂಡಗಳಿಂದ ಅಲಂಕರಿಸುವುದು. ಭಾವ ಚಿತ್ರದ ಮುಂದೆ ಮೊಂಬತ್ತಿಗಳನ್ನು ಬೆಳಗಿಸಿ ಎಲ್ಲರೂ ಮಾತೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುವುದು.
(೨) ಅಕ್ಟೋಬರ್ ೭ ರಂದು ಜಪಸರ ಮಾತೆಯ ಹಬ್ಬವಾದರೂ ತಿಂಗಳಿನ ಪ್ರತಿ ದಿನವೂ ಜಪಸರ ಮಾತೆಯ ಹಬ್ಬವೆಂದು ಪರಿಗಣಿಸಿ ಅದನ್ನು ಸಡಗರದಿಂದ ಆಚರಿಸುವುದು. ಪ್ರಾಥಃಕಾಲ ಮತ್ತು ಸಂಜೆ ತಪ್ಪದೆ ದಿನಕ್ಕೆರಡು ಸಲ ಜಪಸರ ಹೇಳುವುದು ಮತ್ತು ಇಡೀ ದಿನವನ್ನು ಆಕೆಗೆ ಸಮರ್ಪಿಸುವುದು. ತಿಂಗಳಿನ ಎಲ್ಲಾ ದಿನಗಳನ್ನು ಇದೇ ರೀತಿ ಆಚರಿಸುವುದರಿಂದ ನಾವೆಲ್ಲರೂ ಆಕೆಯ ವಿಶ್ವಾಸದಲ್ಲಿ ಪರಿಪೂರ್ಣತೆ ಹೊಂದುತ್ತೇವೆ. ಜಪಸರ ಹೇಳುವುದರೊಂದಿಗೆ ಪುತ್ರನು ತನ್ನ ತಾಯಿಗೆ ಕಾಣಿಕೆ ಸಲ್ಲಿಸುವಂತೆ ನಾವು ಪ್ರತಿ ದಿನ ಕೈಗೊಳ್ಳುವ ಎಲ್ಲಾ ಕಾರ್ಯಗಳನ್ನು ಆಕೆಯ ಹೆಸರಿನಲ್ಲಿ ಸಮರ್ಪಿಸಿ ನಂಬಿಕೆ ಮತ್ತು ವಿಶ್ವಾಸದಿಂದ ಮುನ್ನಡೆಯೋಣ. ನಮ್ಮಲ್ಲಿರುವ ಹಗೆತನ, ದ್ವೇಷ, ಅಸೂಯೆ, ಅಹಂಕಾರಗಳನ್ನು ವರ್ಜಿಸಿ, ತಾಳ್ಮೆ, ದಯೆ, ಅನುಕಂಪ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳುವುದು ಮತ್ತು ನಮ್ಮ ಕೆಲಸ ಕಾರ್ಯಗಳಲ್ಲಿ ಬದ್ದತೆಯನ್ನು ಪಾಲಿಸುವುದು. ಇಂತಹ ಮೂಲಭೂತ ಸದ್ಗುಣಗಳು ನಮ್ಮಲ್ಲಿ ಕಾರ್ಯಗತಗೊಂಡರೆ ನಾವು ಸಚ್ಚಾರಿತ್ರರೂ ಸುಸಂಸ್ಕೃತರೂ ಆಗುತ್ತೇವೆ. ಎಂತಹುದೇ ಸನ್ನಿವೇಶವನ್ನು ಎದುರಿಸುವಷ್ಟು ಧೈರ್ಯ, ತಾಳ್ಮೆ, ಶಕ್ತಿ ನಮ್ಮಲ್ಲಿ ತುಂಬಿಕೊಳ್ಳುತ್ತದೆ ಮತ್ತು ನಾವು ಆಧ್ಯಾತ್ಮಿಕವಾಗಿ ಪ್ರಬುದ್ಧತೆ ಹೊಂದುತ್ತೇವೆ.
ನಿಯಮಗಳನ್ನು ಪಾಲಿಸುವ ವಿಧಾನ
(೩) ಅನಗತ್ಯವಾಗಿ ಹೆಚ್ಚು ಮಾತನಾಡದಿರುವುದು, ಕೆಟ್ಟ ಮಾತುಗಳಿಗೆ ಕಿವಿಗೊಡದಿರುವುದು, ಆಕರ್ಷಕ ವಸ್ತುಗಳಿಗೆ, ನೋಟಗಳಿಗೆ ಮನಸೋಲದಿರುವುದು ಇತ್ಯಾದಿ. ನಮ್ಮಲ್ಲಿ ಸಾಧ್ಯವಾಗುವ ಇಂತಹ ಎಲ್ಲಾ ಸದ್ಭಾವನಾ ಕ್ರಮಗಳನ್ನು ಪಾಲಿಸಲು ಪ್ರಯತ್ನಿಸುವುದು. ದೇವಮಾತೆಯ ನಾಮವನ್ನು ಬಾಯಲ್ಲಿ ಸದಾ ಉಚ್ಚರಿಸುತ್ತ ಇಡೀ ದಿನವನ್ನು ಉಲ್ಲಾಸದಿಂದ ಕಳೆಯಲು ಪ್ರಯತ್ನಿಸುವುದು.
ಮನ:ಪರಿವರ್ತನೆ
ತಪ್ಪು ಮಾಡಿದನೆಂಬ ಅರಿವು ಪ್ರಜ್ಞೆ ಮನದಲ್ಲಿ ಮೂಡಬೇಕು,
ತಪ್ಪೊಪ್ಪಿಗೆಯ ನುಡಿಯು ಹೊರಡಬೇಕು,
ಒಪ್ಪಿಕೊಳ್ಳುವ ಮನಸ್ಸಾಗಬೇಕು,
ಮುಂದೆ ತಪ್ಪುಗಳನ್ನು ಮಾಡುವುದಿಲ್ಲವೆಂದು
ಪ್ರತಿಜ್ಞೆ ಮಾಡಬೇಕು
ನೆಲದ ಹೃದಯ ಮುಟ್ಟಿದವ ಮಾತ್ರ, ಆಕಾಶದ ಅಂತರಾತ್ಮವ ಅರಿಯಬಲ್ಲ
ಮನಪರಿವರ್ತನೆ ಇಂದು ಎಲ್ಲರಿಗೂ ಅತ್ಯಗತ್ಯ. ನಮ್ಮ ಅಂತರಂಗದಲ್ಲಿ ಬೇರು ಬಿಟ್ಟಿರುವ ದ್ವೇಷ ಭಾವನೆ, ಅಸೂಯೆ, ಹಗೆತನ ಮತ್ತು ಸಂಕುಚಿತ ಮನಸ್ಸುಗಳನ್ನು ಬಿಟ್ಟು ಆತ್ಮಶುದ್ಧತೆ ಹೊಂದುವುದೇ ಮನಪರಿವರ್ತನೆ. ನಮ್ಮ ಹಿಂದಿನ ದುರಾಚಾರಗಳನ್ನೆಲ್ಲ ವರ್ಜಿಸಿ ನಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಲು ಈ ಮನಪರಿವರ್ತನೆ ಅತ್ಯಂತ ಪ್ರಯೋಜನಕಾರಿ. ಪ್ರಯತ್ನವಿಲ್ಲದೆ ಫಲವಿಲ್ಲ. ಕಷ್ಟಪಡದೆ ಯಶಸ್ಸು ಇಲ್ಲ. ಪ್ರಯತ್ನವಿದ್ದಲ್ಲಿ ದೇವಮಾತೆಯ ಸಹಾಯವು ನಮ್ಮ ಜೊತೆ ಸಹಕರಿಸುವುದು. ನಮ್ಮಲ್ಲಿ ಉತ್ತಮ ನಡೆಯನ್ನು ಪಾಲಿಸುವ ಮನಸ್ಸಿದ್ದಲ್ಲಿ ಮತ್ತು ದೇವ ಮಾತೆಯ ಅನುಗ್ರಹವಿದ್ದಲ್ಲಿ ಯಾವ ಕಾರ್ಯವೂ ನಮಗೆ ಅಸಾಧ್ಯವಲ್ಲ. ಎಲ್ಲವೂ ಸಾಧ್ಯ. ನಮ್ಮ ಕೆಟ್ಟ ನಡೆ ನುಡಿಗಳು ಬದಲಾದರೆ ನಮ್ಮ ಜೀವನವು ಉತ್ತಮ ತಿರುವು ಪಡೆದುಕೊಳ್ಳುವುದು. ನಮ್ಮ ಕೆಲಸದಲ್ಲಿ ಪ್ರಮಾಣಿಕ ಪ್ರಯತ್ನವಿದ್ದಲ್ಲಿ ನಮ್ಮ ಗುರಿಯನ್ನು ಯಶಸ್ಸಿನೊಂದಿಗೆ ಮುಟ್ಟಬಹುದು.
(೪) ಕ್ರೈಸ್ತರಾದ ನಾವು ಯಾವುದೇ ಕೆಲಸಗಳನ್ನು ಪ್ರಾರಂಭಿಸುವ ಮುನ್ನ ದೇವಮಾತೆಯ ಹೆಸರಿನಲ್ಲಿ ಪ್ರಾರಂಭಿಸುವುದು ಒಳಿತು. ಶುದ್ಧ ಮನಸ್ಸಿನಿಂದ ಸಲ್ಲಿಸುವ ಪ್ರಾರ್ಥನೆಗಳಿಂದ ಮಾತ್ರ ಸೂಕ್ತ ಪ್ರತಿಫಲವನ್ನು ನಿರೀಕ್ಷಿಸಬಹುದು.
ಸದಾ ಹಸನ್ಮುಖಚಿತ್ತರಾಗಿರುವುದು ಒಳಿತು. ನಗುವು ನಮ್ಮ ಮುಖದ ಮೌಲ್ಯವನ್ನು ಹೆಚ್ಚಿಸಿದರೆ, ಪ್ರೀತಿ ನಮ್ಮ ಹೃದಯದ ಮೌಲ್ಯವನ್ನು ಹೆಚ್ಚಿಸುತ್ತದೆ. ಎಲ್ಲರನ್ನು ಪ್ರೀತಿ ಮತ್ತು ಸ್ನೇಹ ಭಾವದಿಂದ, ಮುಗುಳ್ನಗುತ್ತ ಕಂಡರೆ ನಮ್ಮ ಪ್ರೀತಿಯ ಮೌಲ್ಯ ಅಧಿಕರಿಸುವುದು. ಅಂತೆಯೇ ನಮ್ಮ ನೆರೆಹೊರೆಯವರನ್ನು ಪ್ರೀತಿಭಾವದಿಂದ ಕಾಣೋಣ, ಗೌರವಿಸೋಣ.
ಮೂರನೇ ವಿಧಾನ
ಜಪಸರ ಮಾತೆಯ ಮಾಸವನ್ನು ಆಚರಿಸುವ ಮೂರನೇ ವಿಧಾನವೇ, ಧರ್ಮ ಸಭೆಯ ಅಭಿಪ್ರಾಯ ಮತ್ತು ಕಟ್ಟಳೆಗಳನ್ನು ಕೈಗೊಂಡು ನಡೆಯುವುದು. ಧರ್ಮಸಭೆ ನಮ್ಮನ್ನು ವಿಶ್ವಾಸದತ್ತ ಕೊಂಡೊಯ್ಯುತ್ತದೆ. ಧರ್ಮಸಭೆಯು ಮಾತೆ ಮರಿಯಮ್ಮನವರಿಗೆ ಕೃತಜ್ಞತೆ ಸಲ್ಲಿಸುವಂತೆ, ನಾವು ದೇವಮಾತೆಯ ಮುಂದೆ ಅರ್ಪಿಸಿಕೊಳ್ಳೋಣ. ಈ ಅಕ್ಟೋಬರ್ ತಿಂಗಳಿನಲ್ಲಿ ಕೈಗೊಳ್ಳುವ ಎಲ್ಲಾ ದಾನ ಧರ್ಮಗಳಿಗೆ, ತಕ್ಕ ಪ್ರತಿಫಲವು ನಮಗೆ ಲಭಿಸುವುದು. ಅಂತಹ ಉದ್ದೇಶಕ್ಕಾಗಿಯೇ ಈ ತಿಂಗಳ ಪ್ರತಿ ದಿನವನ್ನು ಜಪಸರ ಪ್ರಾರ್ಥನೆಗಳಲ್ಲಿ ಕಳೆಯುವುದಕ್ಕೆ ಧರ್ಮಸಭೆ ಎಲ್ಲರಿಗೂ ಕರೆ ನೀಡುತ್ತದೆ. ಪ್ರತಿಯೊಂದನ್ನೂ ವಿವೇಕದಿಂದ ಅನುಸರಿಸಿ ನಡೆದುಕೊಂಡಲ್ಲಿ ದೈವಿಕ ವರಗಳಿಗೆ ನಾವು ಭಾಜನರಾಗುತ್ತೇವೆ. ವೈಯಕ್ತಿಕ ಉದ್ದೇಶಗಳ ಈಡೇರಿಕೆಗಾಗಿ ಪ್ರಾರ್ಥನೆಯ ಜೊತೆಗೆ ನಮ್ಮ ಪಾಪ ನಿವೇದನೆಯೂ ಮುಖ್ಯ. ಪಾಪ ನಿವೇದನೆಯಿಂದ ಲಭಿಸುವ ಪಾಪಕ್ಷಮೆ ಕಲುಷಿತಗೊಂಡ ನಮ್ಮ ಅಂತರಂಗವನ್ನು ಪಾವನ ಗೊಳಿಸುತ್ತದೆ. ಪ್ರತಿ ದಿನ ಬಲಿಪೂಜೆಯಲ್ಲಿ ಭಾಗವಹಿಸುವುದು, ಪರಮ ಪ್ರಸಾದವನ್ನು ಸ್ವೀಕರಿಸುವುದು, ಒಂದು ಉತ್ತಮ ನಡೆ. ನಮ್ಮ ಅನುದಿನದ ಪ್ರಾರ್ಥನೆಗಳಲ್ಲಿ ವಿಶೇಷವಾಗಿ ವಿಶ್ವಗುರುಗಳನ್ನು ಮತ್ತು ಅವರ ಸೇವೆಗಳನ್ನು ಸ್ಮರಿಸೋಣ. ಕಥೋಲಿಕ ಧರ್ಮವನ್ನು ವಿಶ್ವದೆಲ್ಲೆಡೆ ನೆಲೆಗೊಳಿಸುವ ಮತ್ತು ಸದೃಡಗೊಳಿಸುವ ಮಹತ್ಕಾರ್ಯಗಳು ಇಂದು ಆಗಬೇಕಾಗಿವೆ. ಅಂತಹ ಶ್ರೇಷ್ಟ ಕಾರ್ಯಗಳ ಸಾರಥ್ಯವಹಿಸಿರುವ ವಿಶ್ವಗುರುಗಳನ್ನು ಹಾಗು ವಿಶ್ವದ ಎಲ್ಲಾ ಕ್ರೈಸ್ತರನ್ನು ಮುನ್ನಡೆಸಲು ಬೇಕಾದ ವಿವೇಚನಾ ಶಕ್ತಿಯನ್ನು ದೇವರು ಅವರಿಗೆ ನೀಡಲೆಂದು ಪ್ರಾರ್ಥಿಸೋಣ.
ದೇವಮಾತೆಯ ನಿಷ್ಕಳಂಕ ಮುಖದ ದರ್ಶನವು ನಮಗೆ ಅತ್ಯಂತ ಸಹಕಾರಿ. ಆದ್ದರಿಂದ ಜಪಸರ ಮಾತೆಯ ಸ್ವರೂಪ ಅಥವಾ ಭಾವಚಿತ್ರಗಳನ್ನು ನಮ್ಮ ಮನೆ ಮಠಗಳಲ್ಲಿ ಸ್ಥಾಪಿಸೋಣ. ಅವುಗಳನ್ನು ಪುಷ್ಪಗಳಿಂದ ಅಲಂಕರಿಸಿ ಭಾವಚಿತ್ರದ ಮುಂದೆ ನಿಂತು ಇಂಪಾದ ಗೀತೆಗಳನ್ನು ಹಾಡೋಣ. ಅಂತಹ ಉತ್ತಮ ಸಂಸ್ಕೃತಿ ನಮ್ಮಲ್ಲಿ ಬೆಳೆದರೆ ನಮ್ಮ ವಿಶ್ವಾಸವು ಇನ್ನಷ್ಟು ದ್ವಿಗುಣಗೊಂಡು ನಮ್ಮ ಅಂತರಂಗವನ್ನು ಚೇತನಗೊಳಿಸಬಲ್ಲದು. ಬಲಿಪೂಜೆಯಲ್ಲಿ ಭಾಗವಹಿಸುವುದು ಎಷ್ಟು ಮುಖ್ಯವೋ ನಾವು ಆಲಿಸುವ ಪ್ರಬೋಧನೆಯೂ ಅಷ್ಟೇ ಮುಖ್ಯ. ದೈವವಾಕ್ಯಗಳು ನಮ್ಮ ಅಂತರಂಗವನ್ನು ಬೇಧಿಸ ಬಲ್ಲವು. ಆಲಸ್ಯಗೊಂಡ ಮನಸ್ಸುಗಳನ್ನು ಪುನ:ಶ್ಚೇತನಗೊಳಿಸ ಬಲ್ಲವು. ಆಗ ನಮ್ಮ ಎಲ್ಲಾ ದುರ್ಗುಣಗಳು ದೂರವಾಗಿ ಹೊಸ ನೀತಿ ಸಂಹಿತೆಗಳು ಹುಟ್ಟಿಕೊಳ್ಳುವುವು. ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು (ಹಿಬ್ರಿ: ೪:೧೨) ಇಂತಹ ವಿಶಿಷ್ಟ ಆಚರಣೆಗಳಿಂದ ಅಕ್ಟೋಬರ್ ತಿಂಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬುದೇ ಧರ್ಮಸಭೆಯ ಕರೆ ಮತ್ತು ಜಪಸರ ಮಾತೆಯ
ಆಶಯ. ಅದ್ಭುತ ತಾರೆ, ಅದ್ಭುತಮಾತೆ, ಸ್ವರ್ಗದ ರಾಣಿ, ದೀನಮಾತೆಗೆ ಸಲ್ಲಿಸುವ ಪ್ರತಿಯೊಂದು ಪ್ರಾರ್ಥನಗೂ ನಮಗೆ ಅನುಗ್ರಹಗಳನ್ನು ದಯಪಾಲಿಸಲು ಆಕೆ ಉತ್ಸುಕಳಾಗಿದ್ದಾಳೆ. ಆಕೆಯ ಎಲ್ಲಾ ವರದಾನಗಳು, ಅನುಗ್ರಹಗಳು, ಆಶೀರ್ವಾದಗಳೂ ಉಚಿತವೇ. ಅದಕ್ಕೆ ದೇವಮಾತೆ ಪ್ರತಿಯಾಗಿ ನಮ್ಮಿಂದ ಬಯಸುವುದು ಪಾಪಮುಕ್ತ, ದೋಷಮುಕ್ತ ಪರಿಶುದ್ಧ ಜೀವನ, ನಿರ್ಮಲ ಮನಸ್ಸು ಮತ್ತು ಅವಿರತ ಪ್ರಾರ್ಥನೆ. ಅಂತಹ ಪರಿಶುದ್ಧ ಜೀವನಕ್ಕೆ ಪ್ರತಿ ನಿತ್ಯ ಬಲಿಪೂಜೆಯಲ್ಲಿ ಭಾಗವಹಿಸುವುದು ಮತ್ತು ಪರಮ ಪ್ರಸಾದವನ್ನು ಸ್ವೀಕರಿಸುವುದು ಅಗತ್ಯ. ಇಂಥಹ ಸಾಧನೆಗಾಗಿ ನಮ್ಮ ಎಲ್ಲಾ ದುರಾಚಾರ, ದುರ್ನಡತೆಗಳನ್ನು ಬಿಟ್ಟು ನಮ್ಮನ್ನು ನಾವೇ ಶುದ್ಧೀಕರಣ ಪಡಿಸಿಕೊಳ್ಳಬೇಕಾಗಿದೆ. ಪಾಪಿಗಳು ಮನಃಪರಿವರ್ತನೆ ಹೊಂದದೆ ಅದೇ ಜೀವನದಲ್ಲಿ ನಡೆದರೆ, ಮುಂದೆ ಅವರ ಸ್ಥಿತಿ ಶೋಚನೀಯ. ಕೊನೆ ಗಳಿಗೆಯಲ್ಲಿ ರಕ್ಷಣೆಗೆ ಯಾರೂ ಧಾವಿಸಿ ಬರಲಾರರು. ವಿಶ್ವಾಸ ಕಳೆದುಕೊಂಡವರು ಮಾತೆಯಿಂದಲೂ ತಿರಸ್ಕೃತರಾಗುವರು.
ಭಕ್ತನೊಬ್ಬ ಒಂದು ದಿನ ಅಹಂನಿಂದ ಬೀಗುತ್ತ ದೇವಮಾತೆಗೆ ಪ್ರಾರ್ಥನೆ ಸಲ್ಲಿಸಿದ. ಆದರೆ ದೇವಮಾತೆ ಅವನ ಪ್ರಾರ್ಥನೆಯನ್ನು ಆಲಿಸಲಿಲ್ಲ, ಅಂಗೀಕರಿಸಲಿಲ್ಲ. ಅದಕ್ಕೊಂದು ಕಾರಣವೂ ಇತ್ತು. ಒಂದು ದಿನ ಆತ ಬಹಳವಾಗಿ ಹಸಿದು ಬಳಲಿದ್ದ, ತಕ್ಷಣ ಅವನಿಗೆ ಆಹಾರ ಬೇಕಿತ್ತು. ಇದನ್ನು ಅರಿತ ದೇವಮಾತೆ ಕೂಡಲೆ ಪ್ರತ್ಯಕ್ಷಳಾಗಿ ಒಂದು ಪಾತ್ರೆಯಲ್ಲಿ ರುಚಿಕರ ಆಹಾರವನ್ನು ನೀಡುತ್ತ, ಭಕ್ತನೇ, ಇದೋ ನಾನು ದೇವಮಾತೆ; ನೀನು ಹಸಿದಿರುವೆ ಎಂದು ನನಗೆ ಗೊತ್ತು. ನಿನ್ನ ಹಸಿವನ್ನು ನೀಗಿಸಿ ತೃಪ್ತಿಪಡಿಸಲು ಆಹಾರ ತಂದಿರುವೆ, ಇದೋ, ಸ್ವೀಕರಿಸು ಎಂದಳು. ದೇವಮಾತೆ ನೀಡಿದ್ದು ಅಶುದ್ಧ ಪಾತ್ರೆಯಲ್ಲಿ ರುಚಿಕಟ್ಟಾದ ಆಹಾರ. ಆತ ಹಸಿದಿದ್ದರೂ ಆಕೆ ಕೊಟ್ಟ ಆಹಾರವನ್ನು ತಿರಸ್ಕರಿಸಿ, ನಾನು ಎಷ್ಟೇ ಹಸಿದಿದ್ದರೂ ಇಂತಹ ಕೊಳಕು ಪಾತ್ರೆಯಲ್ಲಿನ ಆಹಾರವನ್ನು ಮುಟ್ಟುವುದೂ ಇಲ್ಲ, ಸೇವಿಸುವುದೂ ಇಲ್ಲ ಎಂದು ಹೇಳಿ ಆಕೆ ಕೊಟ್ಟ ಆಹಾರವನ್ನು ತಿರಸ್ಕರಿಸಿದ. (ಅವನ ವಿಶ್ವಾಸವನ್ನು ಪರೀಕ್ಷಿಸಲೆಂದೇ ದೇವಮಾತೆ ಕೊಳಕು ಪಾತ್ರೆಯಲ್ಲಿ ಆಹಾರ ನೀಡಿದ್ದು) ಅದಕ್ಕೆ ಮರಿಯಮ್ಮನವರು, ಹಾಗಾದರೆ, ನೀನು ಎಷ್ಟೇ ಭಕ್ತಿಯಿಂದ ಪ್ರಾರ್ಥಿಸಿ ನನ್ನನ್ನು ಕರೆದರೂ ನಾನು ಕೊಟ್ಟ ಆಹಾರವನ್ನು ನೀನು ತಿರಸ್ಕರಿಸಿದಂತೆ ನಾನೂ ನಿನ್ನ ಪ್ರಾರ್ಥನೆಯನ್ನು ತಿರಸ್ಕರಿಸುವೆನು ಎಂದರು.
ಹೌದು, ನಾವು ದೇವಮಾತೆಗೆ ಅವಿಶ್ವಾಸದಿಂದ ಸಲ್ಲಿಸುವ ಜಪಸರದ ಪ್ರಾರ್ಥನೆಗಳನ್ನು ಆಕೆ ಸ್ವೀಕಾರ ಮಾಡುವುದಿಲ್ಲ. ನಾವು ಮಾಡುವ ಪ್ರಾರ್ಥನೆಯೇ ಆಕೆಗೆ ಕೇಳಿಸದು, ಆಕೆಯ ಕಿವಿಗಳು ಕಿವುಡಾಗಿವೆ.
ಕನ್ಯಾಮಾತೆ ಮರಿಯಮ್ಮನವರ ನಿಷ್ಠಾವಂತ ಸೇವಕರಾಗಿ, ಉತ್ತಮ ಭಕ್ತರಾಗಿ, ವಿಶ್ವಾಸಿಗಳಾಗಿ ನಾವು ಪಾವನ ಹೊಂದಬೇಕಾದರೆ ಮೊದಲು ಪಾಪದೋಷಗಳಿಂದ ಮುಕ್ತರಾಗಬೇಕು, ಪಾಪರಹಿತ ಪರಿಶುದ್ಧ ಜೀವನವನ್ನು ಅನುಸರಿಸಬೇಕು. ಎಲ್ಲಾ ಅನುಗ್ರಹಗಳಿಗೆ ಮತ್ತು ದೈವಿಕ ಫಲಗಳಿಗೆ ನಮ್ಮ ಪಾಪ ಕಾರ್ಯಗಳೇ ತೊಡಕಾಗಿವೆ. ಒಂದು ವೇಳೆ, ಪಾಪದಲ್ಲಿ ಬೀಳುವ ಸಂದರ್ಭ ಎದುರಾದರೂ, ಕಠಿಣ ಮನಸ್ಸಿನಿಂದ ಅವುಗಳನ್ನು ನಿಗ್ರಹಿಸಬೇಕು, ಮುಂದಕ್ಕೆ ಎಚ್ಚೆತ್ತುಕೊಳ್ಳಬೇಕು. ಅಂಧ ವಿಶ್ವಾದಿಂದ ಪಾಪದಲ್ಲಿಯೇ ಜೀವಿಸಿದರೆ, ದೇವಮಾತೆಯ ಅನುಗ್ರಹಗಳಿಗೆ ನಾವು ಪಾತ್ರರಾಗುವುದಿಲ್ಲ. ಆಕೆಯ ಎಲ್ಲಾ ಅನುಗ್ರಹಗಳು ಉಚಿತವಾಗಿದ್ದರೂ ಅದಕ್ಕೊಂದು ಬೆಲೆ ತೆರಲೇ ಬೇಕು, ಬೆಲೆ ತೆತ್ತಾಗ ಮಾತ್ರ ಅದು ಸಾಧ್ಯ ಮತ್ತು ಲಭ್ಯ.
ಎಲ್. ಚಿನ್ನಪ್ಪ, ಬೆಂಗಳೂರು
(ಎಲ್. ಚಿನ್ನಪ್ಪ ಮೂಲತಃ ಬೆಂಗಳೂರಿನವರು. ಇವರು ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದು ೨೦೦೭ರಲ್ಲಿ. ಧಾರ್ಮಿಕ ಪತ್ರಿಕೆಗಳಿಗೆ ಹಾಗು ಇತರೆ ಪತ್ರಿಕೆಗಳಿಗೆ ನಿಯಮಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಪತ್ನಿಯ ಮರಣ ಇವರನ್ನು ಬರೆಯಲು ಪ್ರೇರೇಪಿಸಿತು. ೨೦೦೯ರಲ್ಲಿ ಆತ್ಮಕತೆ ಆತ್ಮ ನಿವೇದನೆ’ ಎಂಬ ಒಂದು ಭಾಗವನ್ನು ಬರೆದು ಪ್ರಕಟಿಸಿದ್ದಾರೆ, ಉಳಿದ ಭಾಗ ಪ್ರಗತಿಯಲ್ಲಿದೆ.)